ಸುಳ್ಯ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಅತ್ತೆಗೆ ಹರಿತವಾದ ಸಾಧನದಿಂದ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಸೆ.6ರಂದು ಮಧ್ಯಾಹ್ನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಪೆರುವಾಜೆ ಗ್ರಾಮದ ಮುಕ್ಕೂರಿನಲ್ಲಿ ನಡೆದಿದೆ.
ಮುಕ್ಕೂರು ನಿವಾಸಿ ಗಣೇಶ (38) ಹಲ್ಲೆ ನಡೆಸಿದ ಆರೋಪಿ. ಪತ್ನಿ ವಿನಿತಾ (32) ಹಾಗೂ ಆಕೆಯ ತಾಯಿ ಕುಸುಮಾ (50) ಹಲ್ಲೆಗೊಳಗಾದವರು.ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಕಲಹದ ವೇಳೆ ಗಣೇಶ ಇಬ್ಬರಿಗೂ ಹರಿತವಾದ ಸಾಧನದಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ರಕ್ತಗಾಯಗೊಂಡ ವಿನಿತಾ ಹಾಗೂ ಕುಸುಮಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಇಬ್ಬರಿಗೂ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಆರೋಪಿ ಗಣೇಶ ಇಲಿಪಾಷಾಣ ಸೇವಿಸಿದ್ದು, ಆತನನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ.ಘಟನೆ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.








