ತನಿಖೆಗೆ ಆಗ್ರಹಿಸಿ ಸೆ.21ಕ್ಕೆ ಭಕ್ತರ ಬೃಹತ್ ಸಭೆಗೆ ಹರಿಪ್ರಸಾದ್ ನೆಲ್ಲಿಕಟ್ಟೆ ಒತ್ತಾಯ
ಪುತ್ತೂರು: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಲವು ಅವ್ಯವಸ್ಥೆಗಳು ಹಾಗೂ ಹಣಕಾಸಿನ ಅವ್ಯವಹಾರ ನಡೆಯುತ್ತಿದೆ ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ ಆರೋಪಿಸಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಿನೇಶ್ ಕುಮಾರ್ ಜೈನ್, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯನ್ನು ಅಮಾನತಿನಲ್ಲಿಟ್ಟು ಧಾರ್ಮಿಕ ದತ್ತಿ ಇಲಾಖೆ ಕೂಡಲೇ ಅವ್ಯವಹಾರವನ್ನು ತನಿಖೆ ಮಾಡಬೇಕು. ದೇವರ ಭೂಮಿಯ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಯವರು ಇದ್ದು ತನಿಖೆಯಾಗಬೇಕು. ಹಾಗೂ ಕಾರ್ಯ ನಿರ್ವಹಣಾಧಿಕಾರಿಯವರನ್ನು ಕೂಡಲೇ ಕೆಲಸದಿಂದ ವಜಾಗೊಳಿಸಬೇಕು. ಒಂದು ವಾರದೊಳಗೆ ಇದನ್ನು ಮಾಡದಿದ್ದಲ್ಲಿ ಸೆಪ್ಟಂಬರ್ 21ರಂದು ಭಕ್ತರ ಬೃಹತ್ ಸಭೆಯನ್ನು ಜನಾಂದೋಲನದ ಮುಖಾಂತರ ಮಾಡಲಾಗುವುದು ಎಂದು ಎಚ್ಚರಿಸಿದರು.
2025 ರಿಂದ 2026 ಜುಲೈ ವರೆಗೆ ಆಡಳಿತ ಮಂಡಳಿ, ಅಭಿವೃದ್ಧಿ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿಯ ಕಾರ್ಯ ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಭಕ್ತರ ಕಾಣಿಕೆ ಹಾಗೂ ದೇವರ ಹಣವನ್ನು ದುರುಪಯೋಗ ಮಾಡುತ್ತಿದೆ. ಇದಕ್ಕೆ 2025 ರ ಆಡಿಟ್ ರಿಪೋರ್ಟ್ ಮತ್ತು ಲೆಕ್ಕಪತ್ರಗಳೇ ಸಾಕ್ಷಿ ಎಂದು ಅವರು ಹೇಳಿದರು.
2025 ಜನವರಿಯ ನಂತರ ದೇವಸ್ಥಾನದ ಜಾಗವನ್ನು ಆಡಳಿತ ಮಂಡಳಿ ವಶಪಡಿಸಿ ಕೊಳ್ಳುವಾಗ ಅಭಿವೃದ್ಧಿಯ ಕಾರ್ಯವನ್ನು ಭಕ್ತಸಾಗರ ಸಂತೋಷ ಪಟ್ಟಿತ್ತು. ಆಡಳಿತ ಮಂಡಳಿಯ ಅಭಿವೃದ್ಧಿ ಕಾರ್ಯಕ್ಕೆ ಬೆನ್ನುಲುಬಾಗಿ ಭಕ್ತಾದಿಗಳು ನಿಂತರು. ಆದರೆ ಭಕ್ತರ ಈ ಸಹಕಾರವನ್ನು ಆಡಳಿತ ಮಂಡಳಿ ದುರುಪಯೋಗಪಡಿಸಿ ಕೊಂಡಿತ್ತು. ಪುತ್ತೂರು ಶಾಸಕ ಅಶೋಕ ಕುಮಾರ್ ರೈಯವರು ಎಲ್ಲಾ ಕೆಲಸಗಳಲ್ಲಿ ಪ್ರತಿಯೊಂದು ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡಿಯೇ ಎಲ್ಲಾ ಕೆಲಸಗಳು ಆಗುತ್ತಿತ್ತು. ಈ ಹಿಂದಿನ ಯಾವುದೇ ಶಾಸಕರು ಹೀಗೆ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಆದರೆ ಈಗ ಆಡಳಿತ ಮಂಡಳಿ ನಾಟಕ ವ್ಯವಸ್ಥೆಗಾಗಿ ಮಾತ್ರವೇ ಆಗಿದೆ ಎಂದರು.
ಹಲವು ಮನೆ ಮತ್ತು ಅಂಗಡಿಗಳು, ನಾಗನಕಟ್ಟೆ, ನವಗ್ರಹ ಗುಡಿ, ಅಯ್ಯಪ್ಪನ ಗುಡಿ, ನಟರಾಜ ವೇದಿಕೆ ಇನ್ನೂ ತೆಗೆಯಲ್ಪಡುವ ಮಹಾಲಿಂಗೇಶ್ವರ ಸಭಾಂಗಣ ಕಟ್ಟಡ ಇದು ಯಾವುದನ್ನೂ ತೆರವು ಮಾಡುವಾಗ ಧಾರ್ಮಿಕ ದತ್ತಿ ಇಲಾಖೆಯ ಅನುಮತಿ ಕಮಿಟಿ ನಿರ್ಣಯ ಲೋಕೋಪಯೋಗಿ ಇಲಾಖೆಯಿಂದ ಮೌಲ್ಯಮಾಪನ ಮಾಡಲಿಲ್ಲ ಮತ್ತು ಜೆ.ಸಿ.ಬಿ. ಹಿಟಾಚಿ, ಟಿಪ್ಪರ್ ಕೆಲಸವನ್ನು ಮಾಡಲು ಯಾವುದೇ ಟೆಂಡರ್ ಕರೆಯಲಿಲ್ಲ ಎಂದರು.
ಕಟ್ಟಡದ ಅನುಪಯುಕ್ತ ಸಾಮಾಗ್ರಿಗಳನ್ನು ಮಾರಾಟ ಮಾಡುವಾಗ ಕಮಿಟಿಯ ಧಾರ್ಮಿಕ ದತ್ತಿ ಇಲಾಖೆಯ ಅನುಮತಿ ಪಡೆದು ಏಲಂ ಮಾಡುವ ಬದಲು ತನಗೆ ಗೊತ್ತಿರುವ ವ್ಯಕ್ತಿಗಳಿಗೆ ನೇರ ನೇರ ಮಾರಾಟ ಮಾಡಿದ್ದಾರೆ. ಅದೆಷ್ಟೋ ಲಕ್ಷಗಳ ಹಣಕಾಸು ವಹಿವಾಟು ಇದರಲ್ಲಿಯೂ ಅವ್ಯವಹಾರ ಆಗಿದೆ. ನಿಯಮ ಮೀರಿ ಮಾಡೋ ಎಲ್ಲಾ ಹಣಕಾಸು ವ್ಯವಹಾರ ಸರಕಾರದ ವ್ಯವಸ್ಥೆಯಲ್ಲಿ ಭ್ರಷ್ಟಾಚಾರಕ್ಕೆ ದಾರಿ ಎಂದರು.
2025 ಜಾತ್ರೆಯಲ್ಲಿ ಅನೇಕ ಖರ್ಚು ಪಟ್ಟಿಯಲ್ಲಿ ಹಣಕಾಸು ದುರುಪಯೋಗ ಆಗಿದ್ದು, ದೇವಳಕ್ಕೆ ಸೇರಿದ ಜಾಗದ ಕಟ್ಟಡ ತೆರವು ಕಾರ್ಯಕ್ಕೆ ಜೆ.ಸಿ.ಬಿ. ಹಿಟಾಚಿ ಕೆಲಸಗಳಿಗೆ ರೂ. 70 ಲಕ್ಷದವರೆಗೆ ದೇವಸ್ಥಾನದಿಂದ ಬಿಲ್ ಮಾಡಿದ್ದಾರೆ ಎಂದು ಮಾಹಿತಿ ಹಕ್ಕಿನ ಅಡಿಯಲ್ಲಿ ಕೊಟ್ಟಿದ್ದಾರೆ. ಕಮಿಟಿ ಸದಸ್ಯನ ಜೆ.ಸಿ.ಬಿ. ಕೆಲಸವನ್ನು ನಿಲ್ಲಿಸಿ ಅಧ್ಯಕ್ಷರು ತನ್ನದೇ ಸ್ನೇಹಿತನ ಜೆ.ಸಿ.ಬಿ. ಹಿಟಾಚಿಗಳಲ್ಲಿ ಕೆಲಸವನ್ನು ಮಾಡಿಸಿದ್ದಾರೆ. ತೆಂಕಿಲದಲ್ಲಿ 15 ಎಕ್ರೆ ಜಾಗವನ್ನು ವಶಪಡಿಸಿಕೊಳ್ಳುವಾಗ ಆ ಜಾಗದಲ್ಲಿ ಇದ್ದ ಹಲಸು, ಹೆಬ್ಬಲಸು, ಬೇಂಗ ಇಂತಹ ಹಲವು ಜಾತಿ ಮರಗಳನ್ನು ಕಡಿದು ಮಾರಾಟ ಮಾಡಿದ್ದು ಯಾವುದೇ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂದರು.
ದೇವಸ್ಥಾನದ ಭಕ್ತರಿಂದ ಕಾಣಿಕೆ ಅಥವಾ ಸೇವಾ ರೂಪದಲ್ಲಿ ಸ್ವೀಕರಿಸಿದ ನಗದು ಹಣವನ್ನು ಬ್ಯಾಂಕ್ಗೆ ಜಮೆ ಮಾಡದೆ ನೇರವಾಗಿ ಖರ್ಚು ಮಾಡಿರುವುದು ಇದು ನಿಯಮಕ್ಕೆ ವಿರುದ್ಧವಾಗಿದೆ. ನಿಯಮ ಅನುಸಾರ 48 ಗಂಟೆಯೊಳಗೆ ಬ್ಯಾಂಕ್ಗೆ ಜಮೆ ಮಾಡಬೇಕು. ಆದರೆ ಇದು ಯಾವುದೇ ಆಗಿರುವುದಿಲ್ಲ ಎಂದರು.
2026 ಎಪ್ರಿಲ್ ತಿಂಗಳಿನ ಜಾತ್ರೆಗೆ ಸುಡುಮದ್ದಿನ ವೆಚ್ಚ ಭಕ್ತಾದಿಗಳೇ ಭರಿಸಿದ್ದಾರೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ. ಭಕ್ತರೇ ಸುಡುಮದ್ದಿನ ವೆಚ್ಚ ಭರಿಸಿದ್ದಾರೆ? ಅದು ಎಷ್ಟು? ಆ ವ್ಯಕ್ತಿ ಯಾರು? ಇಲಾಖೆಯ ಪರವಾನಿಗೆ ಇದೆಯೇ ಎಂದು ಪ್ರಶ್ನಿಸಿದರು.
ಆಡಳಿತ ಮಂಡಳಿಯ ಅಧ್ಯಕ್ಷರು ಜಾತ್ರೆಯ ಸಂದರ್ಭದಲ್ಲಿ ಹೇಳುತ್ತಿದ್ದರು, ಈ ಬಾರಿ ಪುತ್ತೂರು ಬೆಡಿ ರೂ. 12 ಲಕ್ಷ ಎಂದು ಹಾಕಿ ಲಕ್ಷ ಎಂದು ಯಾವ ಆಧಾರದಲ್ಲಿ ಅಧ್ಯಕ್ಷರು ಹೇಳಿದರು. ಅಧ್ಯಕ್ಷರು ಪಟಾಕಿಗೆ ನೇರ ಹಣ ಸಂಗ್ರಹ ಮಾಡಿದ್ದಾರೆ ಎನ್ನುವುದು ಅನೇಕ ಭಕ್ತರಿಗೆ ಗೊತ್ತಿರುವ ಸಂಗತಿ. ಆದರೆ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನದ ಎಲ್ಲಾ ಆಗುಹೋಗುಗಳಿಗೆ ಅನುಮತಿ ಕಡ್ಡಾಯ. ಆದರೆ ಈ ಆಡಳಿತ ಮಂಡಳಿ ಎಲ್ಲವನ್ನೂ ಉಲ್ಲಂಘನೆ ಮಾಡಿ ಪುತ್ತೂರು ಭಕ್ತರ ಭಕ್ತಿಯ ದೇವರ ಹಣವನ್ನು ದೇವಸ್ಥಾನದ ಅಭಿವೃದ್ಧಿ ಎಂದು ದೇವಸ್ಥಾನದ ಕೆಲವು ನಿಯಮಗಳನ್ನು ಧಾರ್ಮಿಕ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ವಿಶೇಷವಾದ ವಿಚಾರವನ್ನು ಪುತ್ತೂರು ಮಹಾಲಿಂಗೇಶ್ವರ ದೇವರ ಭಕ್ತರು ಗಮನಿಸಬೇಕು. ನಮ್ಮ ಭಕ್ತಿಯ ಆಲಯ. ನಮ್ಮ ಉಸಿರಿಗೆ ಉಸಿರು ಆಗಿರುವ ನಮ್ಮ ದೇವರ ಹಣ ದುರುಪಯೋಗ ಆಗುತ್ತಿದೆ ಎಂದರು.
ದೇವಸ್ಥಾನದಲ್ಲಿ ದೇವರ ಚಿನ್ನವನ್ನು ಸರಿಯಾಗಿ ನಿರ್ವಹಣೆ ಮಾಡದೇ ಪ್ರತೀ ವರ್ಷ ಅದರ ನಿಖರವಾದ ತೂಕವನ್ನು ಅಕ್ಕಸಾಲಿಗರ ಮುಖಾಂತರ ಮಾಡಿ ಅಕ್ಷರಗಳಲ್ಲಿ ಬರೆದು ಕಾರ್ಯನಿರ್ವಹಣಾಧಿಕಾರಿಯವರ ಸಹಿ ಪಡೆಯಬೇಕು ಎಂಬುದು ನಿಯಮ. ಆದರೆ ಅದನ್ನು ನಿರ್ವಹಣೆ ಮಾಡದೇ ಅಂದಾಜು ಲೆಕ್ಕದಲ್ಲಿ ಚಿನ್ನವನ್ನು ನಮೂದಿಸಿರುತ್ತಾರೆ ಎಂದರು.
ಕಳೆದ ಮೂರುವರೆ ವರ್ಷಗಳಿಂದ ಶಾಸಕರು ದೇವಸ್ಥಾನವನ್ನು ಕೇಂದ್ರೀಕರಿ ಸಿಕೊಂಡು ರಾಜಕೀಯ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ದೇವಸ್ಥಾನದ ದುಡ್ಡು ದುರುಪಯೋಗ ಆಗಲು ಸಹಕಾರಿಗಳಾಗಿದ್ದಾರೆ. ಯಾಕೆಂದರೆ ಇಷ್ಟೆಲ್ಲವು ಶಾಸಕರ ಗಮನಕ್ಕೆ ಬಂದೆ ಆಗುತ್ತಿದ್ದು ಪುತ್ತೂರಿನ ಜನರನ್ನು ನಂಬಿಕೆ ಮತ್ತು ಭಾವನೆಗಳನ್ನು ಅಭಿವೃದ್ಧಿ ಎನ್ನುವ ಶಬ್ದದಿಂದ ಮರುಳು ಮಾಡಿಕೊಂಡು ತನ್ನ ಮಾಯಾ ಜಾಲಕ್ಕೆ ಸಿಲುಕಿಸಿದರು. ಕಂಡವರ ಮದುವೆಯಲ್ಲಿ ಉಂಡುವರೆ ಜಾಣ ಎನ್ನುವಂತೆ ಶಾಸಕರು ಮತ್ತು ದೇವಸ್ಥಾನದ ಆಡಳಿತ ಮಂಡಳಿ ಕಾರ್ಯನಿರ್ವಹಣಾಧಿಕಾರಿ ದೇವರ ಹಣವನ್ನು ದುರುಪಯೋಗ ಮಾಡಿದು ದೇವಸ್ಥಾನದಲ್ಲಿ ಕೋಟಿಗೂ ಮೀರಿದ ಅವ್ಯವಹಾರ ಭ್ರಷ್ಟಾಚಾರ ಆಗುತ್ತಿದೆ ಎನ್ನುವುದಕ್ಕೆ ದೇವಸ್ಥಾನದ ಲೆಕ್ಕ ಪತ್ರಗಳೇ ಸಾಕ್ಷಿ. ಭಕ್ತರ ಸಭೆ ಕರೆಯದೆ ಏಕಪಕ್ಷೀಯವಾದ ಜೀರ್ಣೋದ್ದಾರ ಸಮಿತಿ/ ಅಭಿವೃದ್ದಿ ಸಮಿತಿ ರಚನೆ ಮಾಡಿದರೆ ಎಲ್ಲಾ ರಾಜಕೀಯ, ಸಂಘ ಸಂಸ್ಥೆಗಳ ಎಲ್ಲಾ ಹಿಂದು ಸಂಘಟನೆಗಳನ್ನು ಬಿಟ್ಟು ಸಮಿತಿ ಮಾಡಿದ್ದಾರೆ. ಕೇವಲ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಕಾರ್ಯನಿರ್ವಹಣಾಧಿಕಾರಿ ದೇವಸ್ಥಾನದ ಅರ್ಥಿಕ ಇಷ್ಟು ದೊಡ್ಡ ಹಗರಣವಾದ ಕಾರಣಿಕರ್ತರು ಆಗಿದ್ದಾರೆ. ನೋಡಿದರೆ, ಶಾಸಕರು ದೇವಸ್ಥಾನದಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿ ಚಪ್ಪಲಿ ಇಡುವಲ್ಲಿ ರಾಜಕೀಯ ಬಿಟ್ಟು ಬರಬೇಕು ಎನ್ನುವವರು ಈಗ ಇವರಿಗೆ ದೇವಸ್ಥಾನವೇ ರಾಜಕೀಯ ಆಗಿದೆ ಎಂದರು.
ಹರಿಪ್ರಸಾದ್ ನೆಲ್ಲಿಕಟ್ಟೆ ಮಾತನಾಡಿ, ಪ್ರತಿ ಬಾರಿ ಅಷ್ಟಮಂಗಲ ಪ್ರಶ್ನೆ ಇಟ್ಟು ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯ, ದೇವರ ಗುಡಿಗಳ ಶಿಫ್ಟ್ ಕೆಲಸಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ನಂತರದಲ್ಲಿ ಇನ್ನೊಂದು ಪ್ರಶ್ನೆ ಇಟ್ಟಾಗ ಅದು ಸರಿಯಲ್ಲ ಎಂದು ಹೇಳಿ, ಹೊಸದಾಗಿ ಇನ್ನೊಂದು ಯೋಜನೆಯನ್ನು ರೂಪಿಸುತ್ತಿದ್ದಾರೆ. ಹೀಗೆ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಹಾಗಾಗಿ ಮುಂದೆ ಭಕ್ತರ ಸಭೆ ಕರೆಯಬೇಕು. ಮಾತ್ರವಲ್ಲ ಬ್ರಾಹ್ಮಣೇತರರನ್ನು ಅಷ್ಟಮಂಗಲ ಪ್ರಶ್ನೆಗೆ ಕರೆದು, ಚಿಂತನೆ ನಡೆಯಬೇಕಾಗಿದೆ. ಕ್ಷೇತ್ರದ ತಂತ್ರಿಗಳಾದ ಕುಂಟಾರು ರವೀಶ ತಂತ್ರಿ ಅವರು ಇದಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಕೇಳಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಬಾಲಚಂದ್ರ ಸೊರಕೆ, ಅನಿಲ್ ಕುಮಾರ್ ಕರ್ನನ್ನೂಜಿ, ರತ್ನಾಕೆ. ನಾಯರ್, ರಾಜೇಶ್ ಉಪಸ್ಥಿತರಿದ್ದರು.








