
ಪುತ್ತೂರು: ಹಿಂದೂ ಜಾಗರಣ ವೇದಿಕೆಯ ಮಾಜಿ ಜಿಲ್ಲಾ ಮುಖಂಡ ಅಜಿತ್ ರೈ ಹೊಸಮನೆ ಅವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿ ಮಹತ್ವದ ಆದೇಶ ನೀಡಿದೆ.





ಏನಿದು ಪ್ರಕರಣ?
ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿರುವ ಮನೀಷ್ ಕುಲಾಲ್ ಅವರ ತಂದೆ ಆನಂದ್ ಎಸ್. ಅವರು 2023ರ ನವೆಂಬರ್ 10ರಂದು ಅಜಿತ್ ರೈ ಹೊಸಮನೆ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ದೂರಿನ ಪ್ರಕಾರ, ಅಜಿತ್ ರೈ ಹೊಸಮನೆ ಅವರು ಮಧ್ಯಾಹ್ನದ ವೇಳೆ ತಮ್ಮ ಮನೆಗೆ ಅಕ್ರಮವಾಗಿ ಪ್ರವೇಶಿಸಿ, ತಮ್ಮ ಮಗನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಗನಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿತ್ತು.ಈ ವಿಚಾರವನ್ನು ದೊಡ್ಡದು ಮಾಡುವುದು ಬೇಡ ಎಂಬ ಕಾರಣಕ್ಕೆ ಮಕ್ಕಳು ಆರಂಭದಲ್ಲಿ ತನಗೆ ಮಾಹಿತಿ ನೀಡಿರಲಿಲ್ಲ. ಬಳಿಕ ಮತ್ತೆ ಮಗನ ಮೇಲೆ ಹಲ್ಲೆ ಹಾಗೂ ಹತ್ಯೆಗೆ ಸಂಚು ನಡೆದಿದೆ ಎಂಬ ಆತಂಕ ಉಂಟಾಗಿದ್ದು, ಇದರ ಹಿಂದೆ ಅಜಿತ್ ರೈ ಅವರ ಕೈವಾಡವಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.ಅಕ್ರಮವಾಗಿ ಮನೆ ಪ್ರವೇಶಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ತೊಂದರೆ ನೀಡುತ್ತಿರುವ ಅಜಿತ್ ರೈ ಹೊಸಮನೆ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆನಂದ್ ಎಸ್. ಅವರು ಪೊಲೀಸರಿಗೆ ಮನವಿ ಮಾಡಿದ್ದರು.
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ದೂರು ಆಧರಿಸಿ ನವೆಂಬರ್ 11ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಭಾರತೀಯ ದಂಡ ಸಂಹಿತೆಯ (IPC) ಕಲಂ 447, 504 ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.ಪ್ರಕರಣ ರದ್ದುಪಡಿಸುವಂತೆ ಕೋರಿ ಅಜಿತ್ ರೈ ಹೊಸಮನೆ ಅವರು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಇದೀಗ ಪ್ರಕರಣವನ್ನು ವಜಾಗೊಳಿಸಿ ಆದೇಶ ನೀಡಿದೆ.








