
ಹೊಸದಿಲ್ಲಿ: ನಾಗರಿಕ ಪ್ರಕ್ರಿಯಾ ಸಂಹಿತೆಯ (ಸಿಪಿಸಿ) ಕಲಂ 92ರಡಿ ಸಾರ್ವಜನಿಕ ದತ್ತಿಸಂಸ್ಥೆಗಳ ವಿರುದ್ಧ ದಾವೆ ಹೂಡುವ ಮೊದಲು ನ್ಯಾಯಾಲಯದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ. ಇಂತಹ ಅನುಮತಿ ದೊರೆಯುವವರೆಗೆ ಸಿವಿಲ್ ನ್ಯಾಯಾಲಯಗಳು ಯಾವುದೇ ಮಧ್ಯಂತರ ತಡೆ ಅಥವಾ ರಕ್ಷಣಾತ್ಮಕ ಆದೇಶಗಳನ್ನು ನೀಡುವಂತಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.
ಅನುಮತಿ ಸಿಗುವವರೆಗೆ ಯಾವುದೇ ಸಿಂಧುವಾದ ದಾವೆ ದಾಖಲಾಗಿರುವುದಿಲ್ಲ. ಆದ್ದರಿಂದ ರಿಸೀವರ್ ನೇಮಕ ಮಾಡುವ ಆದೇಶಗಳು ಸೇರಿದಂತೆ ಯಾವುದೇ ಮಧ್ಯಂತರ ನಿರ್ದೇಶನಗಳನ್ನು ನೀಡಲು ನ್ಯಾಯಾಲಯಕ್ಕೆ ಅಧಿಕಾರವಿರುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಮನಮೋಹನ್ ಅವರ ಪೀಠವು ಸ್ಪಷ್ಟಪಡಿಸಿದೆ.
ಮಂಡ್ಯದ `ಪೀಪಲ್ಸ್ ಎಜ್ಯುಕೇಷನ್ ಟ್ರಸ್ಟ್ನ ದೈನಂದಿನ ವ್ಯವಹಾರಗಳನ್ನು ನಿರ್ವಹಿಸಲು ತಾತ್ಕಾಲಿಕ ಸಮಿತಿಯನ್ನು ನೇಮಿಸುವಂತೆ ಜಿಲ್ಲಾ ನ್ಯಾಯಾಲಯ ನೀಡಿದ್ದ ನಿರ್ದೇಶನವನ್ನು ಕರ್ನಾಟಕ ಉಚ್ಚನ್ಯಾಯಾಲಯವು ರದ್ದುಗೊಳಿಸಿತ್ತು.
ಹೈಕೋರ್ಟಿನ ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ಅನುಮತಿ ಇಲ್ಲದೆ ಹೂಡುವ ದಾವೆಯು ಜನ್ಮಪಡೆಯದ ಮಗುವಿನಂತೆ ಇರುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಅನುಮತಿ ಅರ್ಜಿಯನ್ನು ಪರಿಗಣಿಸುತ್ತಿರುವ ನ್ಯಾಯಾಲಯವು ಮೂಕ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ ಎಂಬ ಮೇಲ್ಮನವಿದಾರರ ವಾದವನ್ನು ತಿರಸ್ಕರಿಸಿದ ಪೀಠವು ಆರ್ಡರ್ 40 ನಿಯಮ 1ರ ಅಡಿಯಲ್ಲಿ ರಿಸೀವರ್ ನೇಮಕಾತಿಯು ಕಾನೂನುಬದ್ಧವಾಗಿ ದಾಖಲಾದ ದಾವೆಯ ಅಸ್ತಿತ್ವದ ಮೇಲೆ ಅವಲಂಬಿತವಾಗಿರುತ್ತದೆ ಎಂದು ತನ್ನ ಸೆ.18,2026ರ ತೀರ್ಪಿನಲ್ಲಿ ಹೇಳಿದೆ.
ಸಾರ್ವಜನಿಕ ಟ್ರಸ್ಟ್ಗಳ ಆಡಳಿತವನ್ನು ಬದಲಾಯಿಸುವಂತಹ ರಿಸೀವರ್ ನೇಮಕದಂತಹ ಕ್ರಮಗಳು ಗಂಭೀರವಾದವು. ಸುಳ್ಳು ಮತ್ತು ಅನಗತ್ಯ ಮೊಕದ್ದಮೆಗಳಿಂದ ಟ್ರಸ್ಟ್ಗಳನ್ನು ರಕ್ಷಿಸುವ ಉದ್ದೇಶದಿಂದಲೇ ಈ ಕಡ್ಡಾಯ ಅನುಮತಿಯ ನಿಯಮವನ್ನು ರೂಪಿಸಲಾಗಿದೆ ಎಂದು ನ್ಯಾಯಾಲಯವು ಹೇಳಿತು.
ಕಲಂ 92 ದ್ವಿಮುಖಿ ಪಾತ್ರವನ್ನು ಹೊಂದಿದೆ ಎಂದು ಬೆಟ್ಟು ಮಾಡಿದ ಪೀಠವು,ಇದು ಸಾರ್ವಜನಿಕ ಟ್ರಸ್ಟ್ಗಳಿಗೆ ಕಿರುಕುಳದಿಂದ ರಕ್ಷಣೆ ನೀಡುವ ಗುರಾಣಿಯಂತೆ ಮತ್ತು ಸಾರ್ವಜನಿಕ ಹಿತಾಸಕ್ತಿಯಲ್ಲಿ ನ್ಯಾಯಾಲಯದ ನಿರ್ದೇಶನಗಳನ್ನು ಕೋರಲು ಆಸಕ್ತರಿಗೆ ಸಿಗುವ ಪರಿಹಾರದ ಕತ್ತಿಯಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿತು.
ಸಾಮಾನ್ಯವಾಗಿ ಅನುಮತಿ ನೀಡುವ ಮೊದಲು ಪ್ರತಿವಾದಿಗಳಿಗೆ ನೋಟೀಸ್ ಹೊರಡಿಸಬೇಕಾಗುತ್ತದೆ. ಆದರೆ ತುರ್ತು ಪರಿಹಾರದಂತಹ ಅನಿವಾರ್ಯ ಕಾರಣಗಳಿದ್ದರೆ, ಕಾರಣಗಳನ್ನು ಬರವಣಿಗೆಯಲ್ಲಿ ದಾಖಲಿಸಿ ನೋಟೀಸ್ ನೀಡುವ ನಿಯಮದಿಂದ ವಿನಾಯಿತಿ ಪಡೆಯಬಹುದು ಎಂದು ನ್ಯಾಯಾಲಯವು ತಿಳಿಸಿದೆ. ಅಂತಿಮವಾಗಿ ಮೇಲ್ಮನವಿಯನ್ನು ವಜಾಗೊಳಿಸಿದ ಸರ್ವೋಚ್ಚ ನ್ಯಾಯಾಲಯವು,ಕಲಂ 92 ರ ಅಡಿಯಲ್ಲಿ ಅನುಮತಿ ಬಾಕಿ ಇರುವಾಗ ಯಾವುದೇ ಮಧ್ಯಂತರ ರಕ್ಷಣಾ ಆದೇಶಗಳನ್ನು ನೀಡಲಾಗುವುದಿಲ್ಲ ಎಂಬ ನಿಯಮವನ್ನು ಮತ್ತೊಮ್ಮೆ ದೃಢಪಡಿಸಿದೆ.








