ಉಪ್ಪಿನಂಗಡಿ: ದಿನಾಂಕ 09.02.2026 ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಯುಡಿಆರ್ ನಂ. 07/2026 (ಕಲಂ 194 (III)(IV) BNSS 2023) ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತ ಕೆ.ಸಿ ವರ್ಗೀಸ್ (73) ಅವರ ತಲೆಗೆ ಉಂಟಾದ ಗಂಭೀರ ಗಾಯ ಹಾಗೂ ದೇಹದ ಇತರ ಭಾಗಗಳಿಗೆ ಆದ ಗಾಯಗಳಿಂದಾಗಿ ಮೃತಪಟ್ಟಿದ್ದಾರೆ ಎಂಬ ವೈದ್ಯಕೀಯ ವರದಿ ಲಭಿಸಿರುವ ಹಿನ್ನೆಲೆಯಲ್ಲಿ, ಸದ್ರಿ ಪ್ರಕರಣವನ್ನು ದಿನಾಂಕ 13.02.2026 ರಂದು ಅ.ಕ್ರ. 21/2026 u/s 103(1) BNS-2023 ರಂತೆ ಕೊಲೆ ಪ್ರಕರಣವಾಗಿ ಮಾರ್ಪಡಿಸಿ ತನಿಖೆ ಕೈಗೊಳ್ಳಲಾಗಿದೆ.
ಏನಿದು ಪ್ರಕರಣ?
ಮೃತ ಕೆ.ಸಿ ವರ್ಗೀಸ್ ಅವರು ತಮ್ಮ ಪತ್ನಿಗೆ ಹಲ್ಲೆ ನಡೆಸಿದ್ದು, ಆಕೆ ಮನೆಯಿಂದ ಸ್ವಲ್ಪ ದೂರ ತೆರಳಿ ಕುಳಿತಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯ ವ್ಯಕ್ತಿಯೊಬ್ಬರು ಈ ವಿಷಯವನ್ನು ಆಕೆಯ ಮಗ ಕೆ.ವಿ ತೋಮಸ್ ಅವರಿಗೆ ತಿಳಿಸಿದ್ದಾರೆ. ತಕ್ಷಣವೇ ತೋಮಸ್ ತಮ್ಮ ಪರಿಚಯದ ಆಟೋ ರಿಕ್ಷಾ ಚಾಲಕರ ಸಹಾಯದಿಂದ ತಾಯಿಯನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ.ನಂತರ ಆಕೆಯ ತಮ್ಮ ಸಿ.ಟಿ ರಾಜು ಆಸ್ಪತ್ರೆಗೆ ಬಂದು ವಿಚಾರ ತಿಳಿದು, ತನ್ನ ತಮ್ಮ ಚಾಕೊಚ್ಚ ಅವರಿಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿ ಕೂಡಲೇ ಬರಲು ಕರೆದಿದ್ದಾರೆ. ಚಾಕೊಚ್ಚ ಹಾಗೂ ರಾಜು ಇಬ್ಬರೂ ಸೇರಿ ತೋಮಸ್ ಅವರನ್ನು ಸ್ವಲ್ಪ ದೂರ ನಿಲ್ಲಿಸಿ, ಮನೆಯೊಳಗೆ ಹೋಗಿ ಮೃತ ಕೆ.ಸಿ ವರ್ಗೀಸ್ ಅವರಿಗೆ ಕಟ್ಟಿಗೆಯಿಂದ ಹೊಡೆದಿದ್ದಾರೆ ಎನ್ನಲಾಗಿದೆ. ಬಳಿಕ ಹೊರಗೆ ಬಂದು ತೋಮಸ್ ಅವರಿಗೆ “ಸರಿಯಾಗಿ ಹೊಡೆದಿದ್ದೇವೆ, ಅವರನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಿ” ಎಂದು ಹೇಳಿ ಸ್ಥಳದಿಂದ ತೆರಳಿದ್ದಾರೆ.ಆಸ್ಪತ್ರೆಯಲ್ಲಿ ತೋಮಸ್ ತನ್ನ ತಂದೆ ಮಂಚದಿಂದ ಕೆಳಗೆ ಬಿದ್ದು ಅಲ್ಲಿದ್ದ ಕಲ್ಲಿಗೆ ತಲೆ ತಾಗಿ ಮೃತಪಟ್ಟಿರಬಹುದು ಎಂದು ತಿಳಿಸಿ ಪ್ರಕರಣವನ್ನು ಸಹಜ ಮರಣವೆಂದು ತೋರಿಸಲು ಯತ್ನಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಕುರಿತು ಉಪ್ಪಿನಂಗಡಿ ಪೊಲೀಸರು ಕೂಲಂಕಷವಾಗಿ ತನಿಖೆ ನಡೆಸಿ ಕೆ.ವಿ. ತೋಮಸ್ @ ವಿಲ್ಸನ್ (39), ಸಿ.ಟಿ. ರಾಜು @ ವರ್ಗೀಸ್ (59), ಚಾಕೊಚ್ಚ (51) ನೆಲ್ಯಾಡಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.








