
ಕಾರ್ಕಳ: ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಬಿ. ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಹಾಗೂ ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಭಾನುವಾರ ಕಾರ್ಕಳ-ಮೂಡುಬಿದಿರೆ ಹೆದ್ದಾರಿಯ ಸಾಣೂರು ಜಂಕ್ಷನ್ ಬಳಿ ನಡೆದಿದೆ.
ಕಾರ್ಕಳದಿಂದ ಮೂಡುಬಿದಿರೆ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಕಾರು ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದೆ. ಘಟನೆಯಲ್ಲಿ ರಮಾನಾಥ ರೈ ಸೇರಿದಂತೆ ಕೆಲವರು ಗಾಯಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ರಮಾನಾಥ ರೈ ಅವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಅವರ ಆಪ್ತ ಸಹಾಯಕ ಡೆನ್ಜಿಲ್ ಅವರ ಬಲಗಾಲಿಗೆ ಮುರಿತವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಯಾಗಿದೆ.
ಈ ನಡುವೆ ಆಸ್ಪತ್ರೆಯಿಂದಲೇ ಪ್ರತಿಕ್ರಿಯಿಸಿರುವ ರಮಾನಾಥ ರೈ ಅವರು, “ದೇವರ ದಯೆಯಿಂದ, ನಿಮ್ಮೆಲ್ಲರ ಪ್ರಾರ್ಥನೆಯಿಂದ ನಾನು ಆರೋಗ್ಯವಾಗಿದ್ದೇನೆ” ಎಂದು ತಿಳಿಸಿದ್ದಾರೆ.
ಅಪಘಾತದ ಕುರಿತು ಕಾರ್ಕಳ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.








