

ಹೊಸದಿಲ್ಲಿ: ವ್ಯಕ್ತಿಯೊಬ್ಬರು ಒಂದು ಪ್ರಕರಣದಲ್ಲಿ ಬಂಧನದಲ್ಲಿದ್ದರೆ ಅಥವಾ ಆ ಪ್ರಕರಣದಲ್ಲಿ ಜಾಮೀನು ಸಿಗದಿದ್ದರೆ, ಅದೇ ಕಾರಣಕ್ಕೆ ಮತ್ತೊಂದು ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೇಳುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.ಆದರೆ, ನಿರೀಕ್ಷಣಾ ಜಾಮೀನು ಕೇಳುತ್ತಿರುವ ಪ್ರಕರಣದಲ್ಲಿ ಆ ವ್ಯಕ್ತಿಯನ್ನು ಇನ್ನೂ ಬಂಧಿಸಿರಬಾರದು ಎಂಬುದು ಮುಖ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.


ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ವಿಜಯ್ ಬಿಷ್ಟೋಯ್ ಅವರಿದ್ದ ಪೀಠವು ರಾಮ್ ಸಿಂಗ್ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದೆ. 2025ರಲ್ಲಿ ಭಾರತೀಯ ನ್ಯಾಯ ಸಂಹಿತೆ (BNS), 2023ರ ವಿವಿಧ ನಿಬಂಧನೆಗಳ ಅಡಿಯಲ್ಲಿ ದಾಖಲಿಸಿದ್ದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ರಾಮ್ ಸಿಂಗ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ ದಿಲ್ಲಿ ಹೈಕೋರ್ಟ್‌ನ ಮಾರ್ಚ್ 24, 2026ರ ಆದೇಶವನ್ನು ರದ್ದುಗೊಳಿಸಿದೆ.ಧನರಾಜ್ ಅಶ್ವನಿ Vs ಅಮರ್ ಎಸ್. ಮುಲ್ಬಂದಾನಿ (2024)’ ಪ್ರಕರಣದಲ್ಲಿ ಮೂವರು ನ್ಯಾಯಮೂರ್ತಿಗಳ ಪೀಠ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ಬೇರೆ ಪ್ರಕರಣದಲ್ಲಿ ಬಂಧನದಲ್ಲಿರುವ ವ್ಯಕ್ತಿ ಮತ್ತೊಂದು ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೇಳುವುದಕ್ಕೆ ಕಾನೂನಿನಲ್ಲಿ ಯಾವುದೇ ನಿರ್ಬಂಧವಿಲ್ಲ ಎಂದು ಪುನರುಚ್ಚರಿಸಿದೆ.



ರಾಮ್ ಸಿಂಗ್ ಅವರನ್ನು ಒಂದು ಪ್ರಕರಣದಲ್ಲಿ ಬಂಧಿಸಿರುವುದು ಅಥವಾ ಆ ಪ್ರಕರಣದಲ್ಲಿ ಅವರಿಗೆ ಜಾಮೀನು ನಿರಾಕರಿಸಿರುವುದು, ಮತ್ತೊಂದು ಪ್ರಕರಣದಲ್ಲಿ ಅವರು ಇನ್ನೂ ಬಂಧನಕ್ಕೊಳಗಾಗದಿದ್ದರೆ, ಆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೇಳುವುದಕ್ಕೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದೆ.ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮೇಲ್ಮನವಿದಾರರ ಜಾಮೀನು ಅರ್ಜಿ ತಿರಸ್ಕೃತವಾಗಿರುವುದು, ಪ್ರಸ್ತುತ ಪ್ರಕರಣದಲ್ಲಿ ಅವರು ಇನ್ನೂ ಬಂಧನಕ್ಕೊಳಗಾಗದ ಕಾರಣ, ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರುವ ಅವರ ಹಕ್ಕಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದು ಪೀಠ ಹೇಳಿದೆ.
ಎಂಜಿ ಲೀಸಿಂಗ್ & ಫೈನಾನ್ಸ್, ಮೋಹಿತ್ ಗೊಗಿಯಾ, ಶ್ವೇತಾ ಗೊಗಿಯಾ ಮತ್ತು ಭರತ್ ಛಾಬ್ರಾ ಅವರ ಹೆಸರುಗಳನ್ನು ಒಳಗೊಂಡಿದ್ದ ಎಫ್‌ಐಆರ್‌ನಲ್ಲಿ ‘ಸರ್ಫೇಸಿ’ (SARFAESI) ಹರಾಜಿನಲ್ಲಿ ಖರೀದಿಸಿದ ಆಸ್ತಿಗಳನ್ನು ವರ್ಗಾಯಿಸುವುದಾಗಿ ಭರವಸೆ ನೀಡಿ ವಂಚನೆ ಮಾಡಲಾಗಿದೆ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಲಾಗಿತ್ತು.ಈ ಎಫ್‌ಐಆರ್‌ನಲ್ಲಿ ರಾಮ್ ಸಿಂಗ್ ಅವರ ಹೆಸರಿರಲಿಲ್ಲ. ಆರಂಭದಲ್ಲಿಯೂ ಅವರ ವಿರುದ್ಧ ಯಾವುದೇ ನಿರ್ದಿಷ್ಟ ಆರೋಪ ಇರಲಿಲ್ಲ.
ಮುಖ್ಯ ಆರೋಪಿಯೊಂದಿಗಿನ ರಾಮ್ ಸಿಂಗ್ ಅವರ ಆರ್ಥಿಕ ವಹಿವಾಟುಗಳು ತನಿಖೆಯಲ್ಲಿ ಬೆಳಕಿಗೆ ಬಂದ ಬಳಿಕ ಪೊಲೀಸರು ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಸಿದರು.ಈ ಪ್ರಕರಣದಲ್ಲಿ ಹೆಸರಿಸಲಾಗಿದ್ದ ಆರೋಪಿಗಳ ವಿರುದ್ಧ ಈಗಾಗಲೇ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ವಶಪಡಿಸಿಕೊಂಡ ದಾಖಲೆಗಳನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್, ರಾಮ್ ಸಿಂಗ್ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವಷ್ಟು ನೇರ ಸಂಪರ್ಕವನ್ನು ಅವು ತೋರಿಸುತ್ತಿಲ್ಲ ಎಂದು ಹೇಳಿತು.ಈ ಹಿನ್ನೆಲೆಯಲ್ಲಿ ರಾಮ್ ಸಿಂಗ್ ಅವರಿಗೆ ಈ ಹಿಂದೆ ನೀಡಲಾಗಿದ್ದ ಮಧ್ಯಂತರ ರಕ್ಷಣೆಯನ್ನು ಸುಪ್ರೀಂ ಕೋರ್ಟ್ ಖಚಿತಪಡಿಸಿತು.
ಸೆಪ್ಟೆಂಬರ್ 25, 2026ರಂದು ತನಿಖಾಧಿಕಾರಿ ಮುಂದೆ ಹಾಜರಾಗಬೇಕು ಮತ್ತು ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಅವರಿಗೆ ಸೂಚಿಸಿತು. ಅಗತ್ಯವಿದ್ದರೆ ಸಹಿಯ ಮಾದರಿಗಳನ್ನು ನೀಡಬೇಕು ಹಾಗೂ ಮೂರು ವಾರಗಳೊಳಗೆ ಜಾಮೀನು ಬಾಂಡ್ ಸಲ್ಲಿಸಬೇಕು ಎಂದು ಆದೇಶಿಸಿತು.ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು, ಸಾಕ್ಷ್ಯಗಳನ್ನು ತಿರುಚಬಾರದು ಮತ್ತು ವಿಚಾರಣಾ ನ್ಯಾಯಾಲಯದ ಅನುಮತಿಯಿಲ್ಲದೆ ದೇಶ ತೊರೆಯಬಾರದು ಎಂಬ ಷರತ್ತುಗಳನ್ನೂ ನ್ಯಾಯಾಲಯ ವಿಧಿಸಿದೆ.








