


ನವದೆಹಲಿ: ಸೋಪು, ಶಾಂಪೂ, ಟೂತ್ಪೇಸ್ಟ್ ಹೊಸ ಲೇಬಲಿಂಗ್ ನಿಯಮ ಜಾರಿಗೊಳಿಸಲಾಗಿದೆ. ಈ ಉತ್ಪನ್ನಗಳಿಗೂ ಇನ್ಮುಂದೆ ವೆಜ್-ನಾನ್ವೆಜ್ ಗುರುತು ಕಡ್ಡಾಯಗೊಳಿಸಲಾಗಿದೆ.
ಸೋಪ್-ಶಾಂಪೂ, ಟೂತ್ಪೇಸ್ಟ್ ಹಾಗೂ ಇತರ ಸೌಂದರ್ಯವರ್ಧಕಗಳವರೆಗೆ, ಗ್ರಾಹಕರು ಈಗ ಉತ್ಪನ್ನದ ಪ್ಯಾಕೇಜಿಂಗ್ ಮೇಲಿರುವ ಕಡ್ಡಾಯ ಚಿಹ್ನೆಯ ಮೂಲಕ ಅದು ಸಸ್ಯಾಹಾರವೇ ಅಥವಾ ಮಾಂಸಾಹಾರವೇ ಎಂಬುದನ್ನು ಗುರುತಿಸಲು ಸಾಧ್ಯವಾಗುತ್ತದೆ.
ಈ ಉತ್ಪನ್ನಗಳಿಗೆ ಸಂಬಂಧಿಸಿದ ಲೇಬಲಿಂಗ್ ಅವಶ್ಯಕತೆಗಳನ್ನು ನಿರ್ದಿಷ್ಟಪಡಿಸಲು ಕೇಂದ್ರ ಸರ್ಕಾರವು ಕಾನೂನು ಮಾಪನಶಾಸ್ತ್ರ ನಿಯಮಗಳಿಗೆ ತಿದ್ದುಪಡಿ ಮಾಡಿದ್ದು, ತಿದ್ದುಪಡಿ ನಿಯಮಗಳು ಸೋಮವಾರದಿಂದಲೇ ಜಾರಿಗೆ ಬರಲಿವೆ.
ಸಸ್ಯಾಹಾರಿ ಉತ್ಪನ್ನಕ್ಕೆ ಹಸಿರು ಚುಕ್ಕೆ, ಮಾಂಸಾಹಾರಿ ಉತ್ಪನ್ನಕ್ಕೆ ಕೆಂಪು ಅಥವಾ ಕಂದು ಚುಕ್ಕೆ ಕಡ್ಡಾಯವಾಗಿ ಇರಲಿದೆ. ಪ್ಯಾಕೇಜಿಂಗ್ ನಿಯಮಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದ್ದು, ಇದರಿಂದ ಶಾಪಿಂಗ್ ವೇಳೆ ಉತ್ಪನ್ನದ ಮೂಲ ಗುರುತಿಸಲು ಗ್ರಾಹಕರಿಗೆ ಸುಲಭ ಆಗಲಿದೆ.
ಸೋಪು, ಶಾಂಪೂ, ಟೂತ್ಪೇಸ್ಟ್ಗಳು, ಸೌಂದರ್ಯವರ್ಧಕ ಹಾಗೂ ಶೌಚಾಲಯ ಉತ್ಪನ್ನಗಳಿಗೂ ಹೊಸ ಲೇಬಲಿಂಗ್ ನಿಯಮ ಅನ್ವಯವಾಗಲಿದೆ. ಪ್ಯಾಕೇಜ್ನ ಮುಖ್ಯ ಪ್ರದರ್ಶನ ಫಲಕದ ಮೇಲ್ಭಾಗದಲ್ಲಿ ಚಿಹ್ನೆ ಇರಬೇಕು. ಉತ್ಪನ್ನ ಸಸ್ಯಾಹಾರಿಯೋ, ಮಾಂಸಾಹಾರಿಯೋ ಎಂಬುದನ್ನು ಪ್ಯಾಕೇಜ್ನಲ್ಲೇ ತಿಳಿಯಬಹುದು ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.








