Monday, May 6, 2024
spot_imgspot_img
spot_imgspot_img

ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಮೂಲಕ ಮಾನವೀಯತೆ ಮೆರೆದ ಸರ್ವಧರ್ಮೀಯರು.!

- Advertisement -G L Acharya panikkar
- Advertisement -

ಧರ್ಮ, ಜಾತಿಗಿಂತ ಮಾನವ ಧರ್ಮವೇ ಶ್ರೇಷ್ಠವೆಂದು ಸಾಬೀತುಪಡಿಸಿದ ಹತ್ತು ಜನರ “ಕೊಳ್ನಾಡು ಆಶ್ರಯ ವಾಟ್ಸಪ್ ಗ್ರೂಪ್.”

ವಿಟ್ಲ : ಕೊಳ್ನಾಡು ಗ್ರಾಮದ ಕುಳಾಲು ಸಮೀಪದ ಕುಂಟ್ರಕಲದಲ್ಲಿ ಅತ್ಯಂತ ಬಡ ಕುಟುಂಬವೊಂದರ ಮನೆಯ ಕನಸನ್ನು ದಾನಿಗಳು ಮುಂದೆ ನಿಂತು ನನಸು ಮಾಡಿದ ಹೃದ್ಯ ಬೆಳವಣಿಗೆಯೊಂದು ನಡೆದಿದೆ.

ಇಲ್ಲಿನ ಹರೀಶ್ ನಾಯ್ಕ ಮತ್ತು ವಸಂತಿ ದಂಪತಿಗಳು ತಮ್ಮ ಮೂವರು ಪುಟ್ಟ ಮಕ್ಕಳೊಂದಿಗೆ ತೀರಾ ದುರ್ಬಲ ಜೋಪಡಿಯಲ್ಲಿ ವಾಸವಿದ್ದರು. ಮಳೆಗಾಲದಲ್ಲಿ ಮಳೆಯ ನೀರನ್ನೂ ತಡೆದುಕೊಳ್ಳಲಾಗದ ಮತ್ತು ಬೇಸಿಗೆಯಲ್ಲಿ ಬಿಸಿಲನ್ನೂ ತಾಳಲಾರದ ಹುಲ್ಲಿನ ಜೋಪಡಿಯಲ್ಲಿ ವಾಸವಿದ್ದ ಈ ಬಡ ದಂಪತಿಗಳನ್ನು ಕಂಡು ಕೊಳ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೂ ಹಾಲಿ ಉಪಾಧ್ಯಕ್ಷ ಮತ್ತು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿಯವರು ಇವರಿಗೊಂದು ಸೂರು ಒದಗಿಸಿಕೊಡುವ ನಿರ್ಧಾರಕ್ಕೆ ಬಂದರು. ಅಲ್ಲದೇ, ಈ ಕುಟುಂಬದ ದಯನೀಯ ಸ್ಥಿತಿಯನ್ನು ಕೇವಲ ಹತ್ತು ಜನರನ್ನೊಳಗೊಂಡ “ಕೊಳ್ನಾಡು ಆಶ್ರಯ ವಾಟ್ಸಪ್ ಗ್ರೂಪ್” ಎಡ್ಮಿನ್, ಸಮಾಜಸೇವಕ ಹಸೈನಾರ್ ತಾಳಿತ್ತನೂಜಿ ಅವರಲ್ಲಿ ಹಂಚಿಕೊಂಡರು. ಇವರಿಗೆ ಇಂಜಿನಿಯರ್ ಯಾಸಿರ್ ಕುಕ್ಕಿಲ ಜೊತೆಯಾದರು.

ಇದೇ ವೇಳೆ ಅನಿವಾಸಿ ಕನ್ನಡಿಗ ಅಬ್ದುಲ್ ಖಾದರ್ ವೀರಕಂಭ ಈ ಮನೆ ನಿರ್ಮಾಣಕ್ಕೆ ನೆರವಾಗಲು ಮುಂದೆ ಬಂದರು. ಹೀಗೆ ಸರ್ಕಾರಿ ಭೂಮಿಯಲ್ಲಿ ದುರ್ಬಲ ಜೋಪಡಿ ಕಟ್ಟಿಕೊಂಡಿದ್ದ ದಂಪತಿಗಳಿಗೆ ತಾರಸಿಯ ಮನೆ ಕಟ್ಟಿಕೊಡುವ ಪ್ರಯತ್ನ ಆರಂಭವಾಯಿತು. ಮನೆಯ ಗೋಡೆ ಎದ್ದು ನಿಂತಾಗ ಅದರ ತಾರಸಿಯ ಹೊಣೆಯನ್ನು ಹ್ಯುಮಾನಿಟಿ ಬೆಳ್ಮಣ್ಣು ಇದರ ಸ್ಥಾಪಕಾಧ್ಯಕ್ಷ ರೋಷನ್ ಬೆಳ್ಮಣ್ ವಹಿಸಿಕೊಂಡರು. ಹೀಗೆ ಸುಮಾರು ನಾಲ್ಕು ಲಕ್ಷ ರೂಪಾಯಿಗಿಂತಲೂ ಅಧಿಕ ವೆಚ್ಚದಲ್ಲಿ ಒಂದು ವಾಸಯೋಗ್ಯ ತಾರಸಿ ಮನೆ ನಿರ್ಮಾಣವಾಯಿತು.
ಈ ಮನೆಯ ಹಸ್ತಾಂತರ ಕಾರ್ಯಕ್ರಮವು ಡಿಸೆಂಬರ್ 20 ಮಂಗಳವಾರ ನಡೆಯಿತಲ್ಲದೆ ಇದರಲ್ಲಿ ರೋಷನ್ ಬೆಲ್ಮಣ್ ಸುಭಾಶ್ಚಂದ್ರ ಶೆಟ್ಟಿ, ಹಸೈನಾರ್, ಇಂಜಿನಿಯರ್ ಯಾಸಿರ್, ಸಮಾಜಸೇವಕ ಸಲಾಮ್ ಸಮ್ಮಿ, ಸನ್ಮಾರ್ಗ ಸಂಪಾದಕ ಏ ಕೆ ಕುಕ್ಕಿಲ, ಮೌರಿಸ್ ಮತ್ತು ಊರಿನವರು ಭಾಗವಹಿಸಿದರು. ಧರ್ಮದ ಹೆಸರಲ್ಲಿ ಜನರನ್ನು ಎತ್ತಿಕಟ್ಟಿ ಹಿಂದು-ಮುಸ್ಲಿಮರನ್ನು ಪರಸ್ಪರ ಬಡಿದಾಡಿಸಿ ತಮ್ಮ ಬೇಳೆಬೇಯಿಸುತ್ತಿರುವ ಈ ಕಾಲದಲ್ಲಿ ಹಿಂದು, ಮುಸ್ಲಿಂ ಮತ್ತು ಕ್ರೈಸ್ತರು ಸೇರಿಕೊಂಡು ಕಟ್ಟಿರುವ ಈ ಮನೆಯು ಧರ್ಮ ಸಂಘರ್ಷದ ಸೋಲು ಮತ್ತು ಸಾಮರಸ್ಯದ ಗೆಲುವಾಗಿದೆ.

ಧರ್ಮ ಜಾತಿಯ ಆಚೆಗೆ ಮನುಷ್ಯರೆಲ್ಲ ಒಂದೇ ಮತ್ತು ಅವರ ನೋವುಗಳೂ ಒಂದೇ. ಈ ಮನೆ ಸೌಹಾರ್ದದ ಸಂಕೇತವಾಗಿ ಎಲ್ಲರಿಗೂ ಮಾದರಿಯಾಗಲಿ ಎಂದು ಸುಭಾಷ್ ಚಂದ್ರ ಶೆಟ್ಟಿ, ಪವಿತ್ರ ಪೂಂಜ ಹಾರೈಸಿದರು. ಕುಳಾಲು ಬದಿಯಡ್ಕ ತಿಮ್ಮಪ್ಪ ರೈ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.
ಈ ಮನೆ ನಿರ್ಮಾಣಕ್ಕೆ ಮುತುವರ್ಜಿ ವಹಿಸಿದ ಮತ್ತು ಸಹಕರಿಸಿದ ಎಲ್ಲರಿಗೂ ಸುಭಾಶ್ಚಂದ್ರ ಶೆಟ್ಟಿ ಧನ್ಯವಾದ ಅರ್ಪಿಸಿದರು
ಈ ಮನೆ ನಿರ್ಮಾಣಕ್ಕಾಗಿ ಶ್ರಮಿಸಿದ ಸುಭಾಶ್ಚಂದ್ರ ಶೆಟ್ಟಿ, ರೋಷನ್, ಹಸೈನಾರ್, ಯಾಸಿರ್, ಮೌರಿಸ್ ರನ್ನು ಶಾಲುಹೊದಿಸಿ ಕೃತಜ್ಞತೆ ಸಲ್ಲಿಸಲಾಯಿತು.
ಎರಡು ಹೆಣ್ಣು ಮತ್ತು ಒಂದು ಗಂಡು ಮಗುವಿನ ಪುಟ್ಟ ಸಂಸಾರ ನಡೆಸುತ್ತಿರುವ ಹರೀಶ್ ನಾಯ್ಕ ಮತ್ತು ವಸಂತಿ ದಂಪತಿಗೆ ಶುಭ ಹಾರೈಸಿದರು.

- Advertisement -

Related news

error: Content is protected !!