



ಮಂಗಳೂರು: ದಕ್ಷಿಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 2017ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಸುಮಾರು 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ.231/2017ರಂತೆ ಐಪಿಸಿ ಕಲಂ 324, 326 ಹಾಗೂ 504ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆರೋಪಿ ಕಾರ್ಕಳದ ಕುಕ್ಕುಂದೂರ ಜೋಡು ರಸ್ತೆಯ ಕೆಳಗಿನ ಅಂಗಡಿ ಮನೆ ನಿವಾಸಿ, ದಿ. ಸದಾಶಿವ ಆಚಾರ್ಯ ಅವರ ಪುತ್ರ ಪಾರ್ಥ @ ಪಾರ್ಥಸಾರಥಿ ಎಂಬಾತನ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು.ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ 2ನೇ ಸಿಜೆಎಂ ನ್ಯಾಯಾಲಯವು LPC No.08/2026ರಂತೆ ವಾರೆಂಟ್ ಹೊರಡಿಸಿತ್ತು.
ವಾರೆಂಟ್ ಜಾರಿಯಲ್ಲಿದ್ದ ಆರೋಪಿಯನ್ನು ದಕ್ಷಿಣ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಎಎಸ್ಐ ಗಣೇಶ್, ಹೆಡ್ ಕಾನ್ಸ್ಟೆಬಲ್ 836 ಮಂಜುನಾಥ್ ಹಾಗೂ ಪೊಲೀಸ್ ಕಾನ್ಸ್ಟೆಬಲ್ 2367 ಮಲ್ಲಿಕ್ ಜಾನ್ ಅವರು ಕದ್ರಿ ಮೈದಾನ ಬಳಿ ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.








