
ಕುಂದಾಪುರ: 15 ಲಕ್ಷ ರೂ. ಸಾಲ ನೀಡುವುದಾಗಿ ಭರವಸೆ ನೀಡಿ 7 ಲಕ್ಷ ರೂ. ಪಡೆದು ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಬೀಜಾಡಿ ಗ್ರಾಮದ ಸತೀಶ ಕಾಂಚನ್ ಎಂಬಾತನ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮದ ಮೀರಾ ಕೃಷ್ಣಮೂರ್ತಿ ಅವರ ಪುತ್ರ ವಿನಯಕುಮಾರ್ ವಂಚನೆಗೊಳಗಾದವರು ಎಂದು ದೂರಿನಲ್ಲಿ ತಿಳಿಸಲಾಗಿದೆ.ಬೀಜಾಡಿಯಲ್ಲಿರುವ ‘ಏಕದಂತ ಸೌಹಾರ್ದ ಸಹಕಾರಿ ಸಂಘ (ನಿ)’ದಲ್ಲಿ 5 ಲಕ್ಷ ರೂ. ಠೇವಣಿ ಇರಿಸಿದರೆ 15 ಲಕ್ಷ ರೂ. ಸಾಲ ನೀಡುವುದಾಗಿ ಸತೀಶ ಕಾಂಚನ್ ಭರವಸೆ ನೀಡಿದ್ದ ಎನ್ನಲಾಗಿದೆ. ಇದನ್ನು ನಂಬಿದ ವಿನಯಕುಮಾರ್ 2023ರ ಆಗಸ್ಟ್ 16ರಂದು ಸಂಘದ ಸದಸ್ಯತ್ವ ಪಡೆದು 5 ಲಕ್ಷ ರೂ. ಠೇವಣಿ ಇರಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ರಶೀದಿ ಹಾಗೂ ಬಾಂಡ್ ಪಡೆದಿದ್ದರು ಎನ್ನಲಾಗಿದೆ.
ಬಳಿಕ ಇತರೆ ಖರ್ಚು-ವೆಚ್ಚಗಳ ನೆಪದಲ್ಲಿ ಆರೋಪಿಯು ಮತ್ತಷ್ಟು 2 ಲಕ್ಷ ರೂ. ಪಡೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆದರೆ ಭರವಸೆ ನೀಡಿದ್ದ ಸಾಲವನ್ನು ನೀಡದೆ, ಠೇವಣಿ ಹಾಗೂ ಹೆಚ್ಚುವರಿಯಾಗಿ ಪಡೆದ ಹಣ ಸೇರಿ ಒಟ್ಟು 7 ಲಕ್ಷ ರೂ. ವಾಪಸ್ ನೀಡದೆ ವಂಚಿಸಿದ್ದಾನೆ ಎಂದು ದೂರಲಾಗಿದೆ.ಹಣ ಕಳೆದುಕೊಂಡು ತೀವ್ರವಾಗಿ ಮನನೊಂದ ವಿನಯಕುಮಾರ್ 2025ರ ಫೆಬ್ರವರಿ 13ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.ಮಗನ ಸಾವಿನ ಬಳಿಕ ಹಣ ವಾಪಸ್ ನೀಡುವಂತೆ ಮೀರಾ ಕೃಷ್ಣಮೂರ್ತಿ ಆರೋಪಿಯನ್ನು ಸಂಪರ್ಕಿಸಿದಾಗ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಕುರಿತು ಮೀರಾ ಕೃಷ್ಣಮೂರ್ತಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 82/2026ರಂತೆ BNS ಕಲಂ 108, 318(2), 351 ಹಾಗೂ 352ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.








