ವಿಟ್ಲ ಪೊಲೀಸ್ ಠಾಣೆಯಲ್ಲಿ ಶೂನ್ಯ ಪ್ರಕರಣ ದಾಖಲು…!



ವಿಟ್ಲ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಕೇರಳ ಮೂಲದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಅಪ್ರಾಪ್ತ ಬಾಲಕಿ ಆರೋಪಿತ ಬಾಲಕನಿಗೆ ಪರಿಚಯವಾಗಿದ್ದು, ಮೊಬೈಲ್ ಮೂಲಕ ಇಬ್ಬರೂ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.2025ರ ಡಿ.21ರಂದು ಬಾಲಕಿಯು ಆರೋಪಿತನ ಮನೆಗೆ ತೆರಳಿದ್ದ ವೇಳೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರಲಾಗಿದೆ. 2026ರ ಸೆ.8ರಂದು ಬಾಲಕಿಯ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಮನೆಯವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಸೆ.9ರಂದು ಬಾಲಕಿಯು ಮಗುವಿಗೆ ಜನ್ಮ ನೀಡಿದ್ದಾಳೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಶೂನ್ಯ ಅ.ಕ್ರ. 01/2026ರಂತೆ ಪೋಕ್ಸೋ ಕಾಯ್ದೆ 2012ರ ಕಲಂ 4, 5(J)(ii), 5(L), 6 ಹಾಗೂ ಬಿಎನ್‌ಎಸ್ 2023ರ ಕಲಂ 64(2)(m) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆ ನಡೆದ ಸ್ಥಳದ ಆಧಾರದ ಮೇಲೆ ಪ್ರಕರಣವನ್ನು ಸಂಬಂಧಿಸಿದ ಪೊಲೀಸ್ ಠಾಣೆಗೆ ವರ್ಗಾಯಿಸುವ ಪ್ರಕ್ರಿಯೆ ನಡೆಯಲಿದೆ.








