
ವಿಟ್ಲ: ಶ್ರೀಮದ್ ಅನಂತೇಶ್ವರ ದೇವಸ್ಥಾನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಾಲಿಯ ಶ್ರೀ ಚಿತ್ರಾಪುರ ಮಠ ಸಂಸ್ಥಾನದ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರ ವಿಟ್ಲ ಚಾತುರ್ಮಾಸ ವ್ರತದ ಸಮಾರೋಪದ ಅಂಗವಾಗಿ ಸೆ.26ರಂದು ಶನಿವಾರ ಸಂಜೆ ಮಹಾದಿಗ್ವಿಜಯೋತ್ಸವ ಮೆರವಣಿಗೆ ನಡೆಯಲಿದೆ.

ಸಂಜೆ 7 ಗಂಟೆಗೆ ವಿಟ್ಲದ ರಥಬೀದಿಯಿಂದ ಮೆರವಣಿಗೆ ಆರಂಭವಾಗಲಿದ್ದು, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ರಸ್ತೆ, ಸುರಕ್ಷಾ ಹೆಲ್ತ್ ಸೆಂಟರ್, ಬೊಬ್ಬೆಕೇರಿ ರಸ್ತೆ, ಮಂಗಳೂರು ರಸ್ತೆ, ಶಾಲಾ ರಸ್ತೆ, ಪ್ರವಾಸಿ ಮಂದಿರ ರಸ್ತೆ, ದೂರವಾಣಿ ಕಚೇರಿ ಮೂಲಕ ಶ್ರೀಮದ್ ಅನಂತೇಶ್ವರ ದೇವಸ್ಥಾನ ರಸ್ತೆಯಲ್ಲಿ ಸಾಗಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ದ್ವಾರದವರೆಗೆ ತೆರಳಲಿದೆ.ಮೆರವಣಿಗೆಯಲ್ಲಿ ಹುಲಿವೇಷ, ವಿವಿಧ ಆಕರ್ಷಕ ಟ್ಯಾಬ್ಲೋಗಳು ಸೇರಿದಂತೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಲಿವೆ.

ಮೆರವಣಿಗೆಯ ದಾರಿಯುದ್ದಕ್ಕೂ ಭಕ್ತರು ತಮ್ಮ ಮನೆಗಳ ಮುಂದೆ ಸ್ವಾಮೀಜಿಯವರಿಗೆ ಹೂವು, ಆರತಿ, ಫಲ ಸಮರ್ಪಿಸುವ ಮೂಲಕ ಗೌರವ ಸಲ್ಲಿಸಬಹುದಾಗಿದೆ. ಸಮಾಜ ಬಾಂಧವರು ಹಾಗೂ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಹಾದಿಗ್ವಿಜಯೋತ್ಸವವನ್ನು ಯಶಸ್ವಿಗೊಳಿಸುವಂತೆ ವಿಟ್ಲ ಶ್ರೀಮದ್ ಅನಂತೇಶ್ವರ ದೇವಸ್ಥಾನದ ಚಾತುರ್ಮಾಸ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









