


ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯಕ್ಕೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರನ್ನು ನಿಯೋಜಿಸಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಗೃಹ ಕಚೇರಿಯಲ್ಲಿ ಮಾತನಾಡಿದ ಅವರು, ನಮ್ಮ ಶಿಕ್ಷಕರನ್ನು ಎಸ್‌ಐಆರ್ ಪ್ರಕ್ರಿಯೆಯಿಂದ ಹೊರಗಿಡಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಬಹಳ ತೊಂದರೆಯಾಗುತ್ತಿದೆ ಎಂದು ಚುನಾವಣೆ ಆಯೋಗಕ್ಕೆ ಪತ್ರ ಬರೆದಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಚುನಾವಣಾ ಆಯೋಗ ಮಾನವೀಯತೆ ಇಲ್ಲದಂತೆ ವರ್ತಿಸುತ್ತಿದೆ ಎಂದು ಹೇಳಿದರು.
ಎಸ್‌ಐಆರ್ ಕಾರ್ಯದ ಹೊರೆಯಿಂದಾಗಿ ಶಿಕ್ಷಕರು ಬಳಲಿದ್ದಾರೆ. ಈ ಕಾರ್ಯ ವಿಳಂಬವಾಗುತ್ತಲೇ ಇದ್ದು, ಶಾಲೆಗಳಲ್ಲಿ ಸರಿಯಾಗಿ ಶೈಕ್ಷಣಿಕ ಚಟುವಟಿಕೆಗಳು ನಡೆಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಮಕ್ಕಳ ಫಲಿತಾಂಶದ ಮೇಲೂ ಪರಿಣಾಮ ಬೀರುವ ಆತಂಕವಿದೆ. ಇದೇ ಕಾರಣಕ್ಕೆ ಜಾತಿ ಗಣತಿ, ವಿವಿಧ ಸಮೀಕ್ಷೆಗಳು ಹಾಗೂ ಆಡಳಿತಾತ್ಮಕ ಸರ್ವೇ ಕಾರ್ಯಗಳಿಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರನ್ನು ಬಳಸಿಕೊಳ್ಳದಂತೆ ಹೊಸ ಮಸೂದೆ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನಮ್ಮ ಶಿಕ್ಷಕರು ನಮಗೆ ಬಹಳ ಸಹಕಾರಿಯಾಗಿದ್ದಾರೆ. ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳಿಂದ ಉತ್ತಮ ಫಲಿತಾಂಶ ಬರಲು ಶಿಕ್ಷಕರ ಪರಿಣಾಮಕಾರಿ ಬೋಧನೆಯೇ ಪ್ರಮುಖ ಕಾರಣ. ಆದರೆ ಜಾತಿ ಗಣತಿ, ವಿವಿಧ ಸರ್ವೇ ಸೇರಿದಂತೆ ಹಲವು ಕೆಲಸಗಳಿಗೆ ಶಿಕ್ಷಕರನ್ನೇ ಬಳಸಿಕೊಳ್ಳುವ ವ್ಯವಸ್ಥೆ ನಿರ್ಮಾಣವಾಗಿದೆ. ಇದನ್ನು ಬದಲಾಯಿಸಲೇಬೇಕಿದೆ ಎಂದು ಮಧು ಬಂಗಾರಪ್ಪ ಹೇಳಿದರು.
ಎಸ್‌ಐಆರ್ ಕರ್ತವ್ಯದಿಂದ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಶಾಲಾ ಮಕ್ಕಳು ಮತ್ತು ಪೋಷಕರಿಂದ ದೂರುಗಳು ಬರುತ್ತಿವೆ. ಶಾಲೆಯಲ್ಲಿ ಶಿಕ್ಷಕರೇ ಇಲ್ಲ, ಮಧ್ಯಾಹ್ನದ ಊಟದ ಬಳಿಕ ಮಕ್ಕಳನ್ನು ಮನೆಗೆ ಕಳುಹಿಸಲಾಗುತ್ತಿದೆ ಎಂಬಂತಹ ದೂರುಗಳೂ ಬಂದಿವೆ. ಇಂತಹ ಪರಿಸ್ಥಿತಿ ಮುಂದುವರಿಯಬಾರದು ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರು ಕೂಡ ಈ ವಿಚಾರವನ್ನು ಹಲವು ಬಾರಿ ಪ್ರಸ್ತಾಪಿಸಿ, ಮೇಲ್ಮನೆಯಲ್ಲಿ ಶಿಕ್ಷಕರನ್ನು ಎಸ್‌ಐಆರ್ ಸೇರಿದಂತೆ ಇತರೆ ಕೆಲಸಗಳಿಂದ ಮುಕ್ತಗೊಳಿಸುವಂತೆ ಒತ್ತಡ ಹಾಕಿದ್ದಾರೆ. ನನ್ನನ್ನು ಭೇಟಿಯಾದ ಪೋಷಕರು, ಶಿಕ್ಷಕರು, ಶಾಸಕರು ಹಾಗೂ ಇತರ ಜನ ಪ್ರತಿನಿಧಿಗಳು ʻಇದು ಅನ್ಯಾಯ, ಶಿಕ್ಷಕರಿಗೆ ಪಾಠ ಮಾಡುವ ಕೆಲಸ ಮಾತ್ರ ಕೊಡಿʼ ಎನ್ನುತ್ತಿದ್ದಾರೆ. ಆದರೆ ನಾವು ಎಷ್ಟೇ ಮನವಿ ಮಾಡಿದರೂ ಚುನಾವಣಾ ಆಯೋಗ ಕೇಳಿಸಿಕೊಳ್ಳುತ್ತಿಲ್ಲ. ಮಾನವೀಯತೆ ಮರೆತು ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿದೆ.








