Monday, September 28, 2026
spot_imgspot_img
spot_imgspot_img

ಕಂಬಳ ಕ್ಷೇತ್ರದ ಹೀರೋ ನಂದಳಿಕೆ ಪಾಂಡು ಕೋಣ ವಿಧಿವಶ

- Advertisement -
- Advertisement -

ಕಾರ್ಕಳ: ಕಂಬಳ ಕ್ಷೇತ್ರದ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ ನಿರ್ಮಿಸಿದ್ದ, 200ಕ್ಕೂ ಅಧಿಕ ಪದಕಗಳ ಹೆಗ್ಗಳಿಕೆ ಹೊಂದಿದ್ದ ಓಟಗಾರ, ನಂದಳಿಕೆ ಶ್ರೀಕಾಂತ್ ಭಟ್ ಅವರ ಚಾಂಪಿಯನ್ ಕೋಣ ಪಾಂಡು ವಯೋಸಹಜ ಅನಾರೋಗ್ಯದಿಂದ ವಿಧಿವಶವಾಗಿದೆ.

ಕಾರ್ಕಳ ಜೀವನ್ ದಾಸ್ ಅಡ್ಯಂತಾಯರ ಮನೆಯಲ್ಲಿದ್ದ ಪಾಂಡು ಕಂಬಳ ಜೀವನ ಆರಂಭಿಸಿದ್ದ. ಅವರು ಜೂನಿಯರ್ ಹಗ್ಗ ವಿಭಾಗದಲ್ಲಿ ಓಡಿಸುತ್ತಿದ್ದರು. ಒಂದು ವರ್ಷದ ಬಳಿಕ ಅತ್ತೂರು ಮನ್ಮಥ ಶೆಟ್ಟಿ ತಮ್ಮ ಕಂಬಳ ಜರ್ನಿಯ ಆರಂಭಕ್ಕಾಗಿ ಅಡ್ಯಂತಾಯರಿಂದ ಪಾಂಡುವನ್ನು ಕರೆತಂದರು. ಅಲ್ಲಿಂದ ಪಾಂಡುವಿನ ಮೆಡಲ್ ಜರ್ನಿ ಆರಂಭವಾಯಿತು.

ಜೂನಿಯರ್ ಹಗ್ಗ ವಿಭಾಗದಲ್ಲಿ ಸತತ ಎರಡು ವರ್ಷ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡಿತ್ತು. ಅತ್ತೂರು ಮನ್ಮಥ ಶೆಟ್ಟಿ ಜೂನಿಯರ್ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ಕಾರಣ ಮುಂದಿನ ವರ್ಷ ಕರಿಂಜೆ ವಿನು ವಿಶ್ವನಾಥ್ ಶೆಟ್ಟಿ ಪಾಂಡುವನ್ನು ಕರೆತಂದರು. ಅಲ್ಲಿ ಪಾಂಡು ದೊಡ್ಡ ಹೆಸರು ಮಾಡಿತು. ಮುಂದೆ ನಂದಳಿಕೆ ಶ್ರೀಕಾಂತ್ ಭಟ್ರ ಹಟ್ಟಿಗೆ ಬಂದ ಪಾಂಡು ಅಷ್ಟರಲ್ಲೇ ಲೆಜೆಂಡ್ ಪಟ್ಟಕ್ಕೇರಿತ್ತು. ಕಂಬಳ ಓಟಗಾರ ಜಯಕರ ಮಡಿವಾಳ ಅವರ ದನಿಗೆ ಸದಾ ಅಲರ್ಟ್ ಆಗಿರುತ್ತಿದ್ದ ಪಾಂಡು ಅನೇಕ ಪದಕಗಳನ್ನು ತಂದುಕೊಡುವಲ್ಲಿ ಕಾರಣವಾಗಿತ್ತು.

ತನ್ನ ವಿಶೇಷ ಸಾಧನೆಗಾಗಿ ಕಂಬಳ ಪ್ರಿಯರ ಮನಗೆದ್ದಿದ್ದ ಈ ಕೋಣ ಬೆಂಗಳೂರಿನಲ್ಲೂ ಸನ್ಮಾನ ಸ್ವೀಕರಿಸಿದ್ದು ವಿಶೇಷವಾಗಿತ್ತು. ಪುತ್ತೂರು ಕಂಬಳದ ಸರಣಿಯಲ್ಲೂ ಪದಕಗಳನ್ನು ಬಾಚಿಕೊಂಡಿತ್ತು. ಇದೀಗ ಪಾಂಡು ಸಾವಿನ ಸುದ್ದಿ ಕೇಳಿ ಕಂಬಳಾಭಿಮಾನಿಗಳು ಕಂಬನಿ ಮಿಡಿದಿದ್ದು, ಸಂತಾಪ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!