

ಮಡಿಕೇರಿ: ವರ್ಷಗಳ ಕಾಲ ಕುವೈತ್ನಲ್ಲಿ ದುಡಿದು, ಕುಟುಂಬದೊಂದಿಗೆ ಸಮಯ ಕಳೆಯಲು ಸ್ವದೇಶಕ್ಕೆ ಮರಳಿದ್ದ ಸುಂಟಿಕೊಪ್ಪದ ವ್ಯಕ್ತಿಯೊಬ್ಬರು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಸುಂಟಿಕೊಪ್ಪ ಕೆಇಬಿ ಸಮೀಪದ ಮಾಸ್ಟರ್ ಬಡಾವಣೆ ನಿವಾಸಿ ಬಶೀರ್ ಮೃತ ದುರ್ದೈವಿ. ಬಶೀರ್, ಹಲವು ವರ್ಷಗಳಿಂದ ಕುವೈತ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ತಾವು ದುಡಿದ ಹಣವನ್ನು ಸುಂಟಿಕೊಪ್ಪದಲ್ಲಿದ್ದ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ ಕಳುಹಿಸುತ್ತಿದ್ದರು. ಇದೇ ಹಣದಿಂದ ಕುಟುಂಬದ ಜೀವನ ಸಾಗುತ್ತಿತ್ತು. ವರ್ಷಗಳ ಬಳಿಕ ಸಿಕ್ಕ ರಜೆಯಲ್ಲಿ ಪತ್ನಿ ಹಾಗೂ ಮಕ್ಕಳೊಂದಿಗೆ ಸಮಯ ಕಳೆಯಬೇಕೆಂಬ ಆಸೆಯಿಂದ ಬಶೀರ್ ಕುವೈತ್ನಿಂದ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದರು.
ಆದರೆ, ಶನಿವಾರ ರಾತ್ರಿ ಸುಮಾರು 3 ಗಂಟೆ ವೇಳೆಗೆ ಕುವೈತ್ನಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಶೀರ್ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು, ಹೃದಯಾಘಾತಕ್ಕೊಳಗಾಗಿ ವಿಮಾನ ನಿಲ್ದಾಣದಲ್ಲೇ ಕೊನೆಯುಸಿರೆಳೆದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಬೆಂಗಳೂರಿಗೆ ತೆರಳಿದ್ದು, ಬಶೀರ್ ಅವರ ಮೃತದೇಹ ಬೆಂಗಳೂರಿನಲ್ಲಿದೆ. ಮೃತದೇಹವನ್ನು ಸುಂಟಿಕೊಪ್ಪಕ್ಕೆ ತಂದು ಕುಟುಂಬಸ್ಥರು ಹಾಗೂ ಬಂಧು-ಬಳಗದ ಅಂತಿಮ ದರ್ಶನದ ಬಳಿಕ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ ಎಂಬುದಾಗಿ ತಿಳಿದುಬಂದಿದೆ.








