


ಮಂಗಳೂರು: ಹಾಡಹಗಲೇ ಕಾಲೇಜು ಆವರಣದಿಂದ ವಿದ್ಯಾರ್ಥಿನಿಯೊಬ್ಬಳನ್ನು ಹಲವು ವ್ಯಕ್ತಿಗಳು ಬಲವಂತವಾಗಿ ಎಳೆದೊಯ್ದು ಥಾರ್ ಜೀಪ್‌ನಲ್ಲಿ ಅಪಹರಿಸಿರುವ ಆಘಾತಕಾರಿ ಘಟನೆ ಮಂಗಳೂರಿನ ಕಣಚೂರು ಮೆಡಿಕಲ್ ಕಾಲೇಜು ಆವರಣದಲ್ಲಿ ನಡೆದಿದೆ. ಅಪಹರಣದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.
ಅಪಹರಣಕ್ಕೊಳಗಾದ ಯುವತಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಮೆಡಿಕಲ್ ವಿದ್ಯಾರ್ಥಿನಿಯಾಗಿದ್ದು, ಹಿಂದೂ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದ ಕಾರಣ ಆಕೆಯ ಕುಟುಂಬಸ್ಥರೇ ಕಾಲೇಜು ಆವರಣಕ್ಕೆ ಬಂದು ಬಲವಂತವಾಗಿ ಕರೆದೊಯ್ದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಲವು ವ್ಯಕ್ತಿಗಳು ಸೇರಿ ವಿದ್ಯಾರ್ಥಿನಿಯನ್ನು ಎಳೆದೊಯ್ದು ವಾಹನಕ್ಕೆ ಹತ್ತಿಸಿಕೊಂಡು ಪರಾರಿಯಾಗುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಪ್ರತಿಕ್ರಿಯಿಸಿ, ಯುವತಿಯನ್ನು ಆಕೆಯ ಕುಟುಂಬಸ್ಥರೇ ಬಲವಂತವಾಗಿ ಕರೆದೊಯ್ದಿರುವ ಆರೋಪವಿದ್ದು, ಇದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಯುವತಿ ವಯಸ್ಕಳಾಗಿದ್ದು, ತಾನು ಎಲ್ಲಿ ಮತ್ತು ಯಾರೊಂದಿಗೆ ವಾಸಿಸಬೇಕು ಎಂದು ನಿರ್ಧರಿಸುವ ಸಂಪೂರ್ಣ ಕಾನೂನುಬದ್ಧ ಹಕ್ಕು ಆಕೆಗಿದೆ.
ಘಟನೆ ನಡೆದ ತಕ್ಷಣವೇ ಕಾಲೇಜು ಆಡಳಿತ ಮಂಡಳಿ ಅಥವಾ ಸ್ಥಳದಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದರೆ, ಅಪಹರಣಕಾರರ ವಾಹನವು ನಗರದಿಂದ ದೂರ ಹೋಗುವ ಮೊದಲೇ ತಡೆದು ನಿಲ್ಲಿಸಿ ಯುವತಿಯನ್ನು ರಕ್ಷಿಸಬಹುದಿತ್ತು ಎಂದು ಆಯುಕ್ತರು ಅಭಿಪ್ರಾಯಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತೀವ್ರ ತನಿಖೆ ನಡೆಸಿ ಆದಷ್ಟು ಬೇಗ ಯುವತಿಯನ್ನು ಪತ್ತೆಹಚ್ಚುವಂತೆ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ತಿಳಿಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.








