ಈ ಭಾಗದ ಜನರ ಬಹಳ ವರುಷದ ಕನಸು ಇಂದು ನನಸಾಗಿದೆ -ಶಾಸಕ ಅಶೋಕ್ ಕುಮಾರ್ ರೈ



ವಿಟ್ಲ: (ನ. 19) ಗುರುವಾರದಂದು ವಿಟ್ಲದ ಇಂದಿರಾ ಕ್ಯಾಂಟೀನ್ ಅನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿದರು.


ಅವರು ದ.ಕ.ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಮಂಗಳೂರು, ವಿಟ್ಲ ಪಟ್ಟಣ ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ವಿಟ್ಲ ನಾಡ ಕಚೇರಿ ಬಳಿ ನೂತನವಾಗಿ ಆರಂಭಗೊಂಡ ಇಂದಿರಾ ಕ್ಯಾಂಟಿನ್ ನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಭಾಗದ ಜನರ ಬಹಳ ವರುಷದ ಕನಸು ಇಂದು ನನಸಾಗಿದೆ. ಬಡವನಿಗೆ ಬದುಕು ಕೊಡುವ ಕೆಲಸ ಈ ಇಂದಿರಾ ಕ್ಯಾಂಟಿನ್ ನಿಂದ ಆಗುತ್ತಿದೆ. ಹಸಿದವರಿಗೆ ಹೊಟ್ಟೆ ತುಂಬಿಸಲು ಇದು ಸಹಕಾರಿ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ರವರು ಹೇಳಿದರು.

ರಾಜ್ಯದಲ್ಲಿರುವ ಹಲವು ಇಂದಿರಾ ಕ್ಯಾಂಟಿನ್ ನ ಕೆಲಸಗಳು ಅಂತಿಮಗೊಂಡಿದ್ದರೂ ಅದು ಉದ್ಘಾಟನೆ ಆಗಿರಲಿಲ್ಲ. ಈ ವಿಚಾರವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ಗಮನಕ್ಕೆ ತಂದು ಕೂಡಲೇ ಇಂದಿರಾ ಕ್ಯಾಂಟಿನ್ ಗಳನ್ನು ವರ್ಚುವಲ್ ಆಗಿ ಬೆಂಗಳೂರಿನಿಂದ ಉದ್ಘಾಟಿಸುವಂತೆ ಮನವಿ ಮಾಡಿದ್ದೆ. ಇದೀಗ ಅವರು ರಾಜ್ಯದಲ್ಲಿ ಉದ್ಘಾಟನೆಗೆ ಸಿದ್ದವಾಗಿದ್ದ ಎಲ್ಲಾ ಇಂದಿರಾ ಕ್ಯಾಂಟಿನ್ ಅನ್ನು ಉದ್ಘಾಟಿಸಿದ್ದಾರೆ ಎಂದು ತಿಳಿಸಿದರು.
ಒಂದು ದಿನ ಒಬ್ಬ ವ್ಯಕ್ತಿಯ ಆಹಾರಕ್ಕೆ ಒಟ್ಟು ಖರ್ಚು 62 ರೂಪಾಯಿ ಖರ್ಚಾಗುತ್ತಿದ್ದು, ಸರಕಾರ 37 ರೂಪಾಯಿ ನೀಡುತ್ತಿದ್ದು, ಸಾರ್ವಜನಿಕರಿಂದ
25ರೂಪಾಯಿ ತೆಗೆದುಕೊಳ್ಳಲಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ ಈಗಾಗಲೇ 10 ಇಂದಿರಾ ಕ್ಯಾಂಟಿನ್ ಕಾರ್ಯಾಚರಿಸುತ್ತಿದೆ. ಬಡವರು ಯಾರೂ ಹಸಿವಿನಿಂದ ಇರಬಾರದು ಎನ್ನುವುದು ನಮ್ಮ ಸರಕಾರದ ಯೋಚನೆಯಾಗಿದೆ.
ಹಸಿವು ಮುಕ್ತ ರಾಜ್ಯ ಮಾಡುವ ಕನಸು ನಮ್ಮ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರದ್ದಾಗಿದೆ. ರಾಜ್ಯದಲ್ಲಿರುವ ಬಡವರ ಕಣ್ಣೀರೊರೆಸುವ ಕೆಲಸ ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರದಿಂದ ಆಗಿದೆ. ವಿರೋಧ ಪಕ್ಷದವರು ಅಭಿವೃದ್ಧಿ ಆಗಿಲ್ಲ ಎಂದು ಬಾಯಿಬಡ್ಕೊತ್ತಿದ್ದಾರೆ. ಈಗಾಗಾಗಲೇ ಕೋಟಿಗಟ್ಟಲೆ ಅನುದಾನ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಬಂದಿದೆ. ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ನೀರು ಸರಬರಾಜಿಗೆ ನಾವು ಕೊಟ್ಟಷ್ಟು ಅನುದಾನ ಯಾರಾದರೂ ಕೊಟ್ಟಿದ್ದರೆ ನಾವು ಅವರು ಹೇಳಿದಾಗೆ ಕೇಳ್ತೇವೆ ಎಂದರು.
ಜನಪ್ರತಿನಿಧಿಯಾಗಿ ಜನರ ಯೋಜನೆಗಳನ್ನು ನಿಮ್ಮ ಮುಂದಿಡುತ್ತಿದ್ದೆನೆ. ಪ್ರತೀ ಗ್ರಾ.ಪಂ.ಗೆ 5ಕೋಟಿ ಅನುದಾನ ನೀಡಲಾಗುವುದು. ಗ್ರಾಮಾಂತರ ಪ್ರದೇಶ ಅಭಿವೃದ್ಧಿ ಮಾಡಬೇಕೆನ್ನುವ ಕನಸು ನಮ್ಮದಾಗಿದೆ.ಭಾಷಣದಿಂದ ಯಾರದ್ದೇ ಮನೆ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಮಕ್ಕಳಿಗೆ ಕ್ವಾಲಿಟಿ ಎಜುಕೇಶನ್ ನೀಡಿದಾಗ ಮನೆಬೆಳಗಲು ಸಾಧ್ಯ. ನಮ್ಮ ವಿಧಾನ ಸಭಾಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಕೆಪಿಎಸ್. ಮಾದರಿಯ ಶಾಲೆ ನಿರ್ಮಾಣ ಮಾಡುವ ಇರಾದೆ ಇದೆ ಎಂದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಎಂ. ಬಿ. ಶ್ರೀನಾಥ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ
ಡಾ. ಜಿ. ಸಂತೋಷ್ ಕುಮಾರ್, ಬಂಟ್ವಾಳ ತಹಶೀಲ್ದಾರ್ ಮಂಜುನಾಥ ಜಿ. , ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.







