

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ವಿರೋಧ ಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಯು 3ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆ ವೇಳೆ ನೂರಾರು ಜನರ ನಡುವೆ ಮೋದಿ ಪರ ಘೋಷಣೆ ಕೂಗುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆದಿದೆ.
ಪ್ರತಿಭಟನೆಯಲ್ಲಿ ವಿಪಕ್ಷಗಳ ಕಾರ್ಯಕರ್ತರು ಮೋದಿ ವಿರುದ್ಧ ಘೋಷಣೆ ಕೂಗಿದರು. ಆದರೆ, ಗುಂಪಲ್ಲಿ ವ್ಯಕ್ತಿಯೊಬ್ಬ ಮೋದಿ ಪರವಾಗಿ ಘೋಷಣೆ ಕೂಗಿದ್ದು, ಸ್ಥಳದಲ್ಲಿ ಗದ್ದಲ ಉಂಟು ಮಾಡಿತು. ತಕ್ಷಣ ಜನಸಮೂಹ ಅವರನ್ನು ಸುತ್ತುವರಿಯಿತು. ವ್ಯಕ್ತಿಯನ್ನು ತಳ್ಳಾಡಿ ಹಲ್ಲೆ ನಡೆಸಲಾಯಿತು. ಆತನಿಗೆ ಕಪಾಳಮೋಕ್ಷ ಮಾಡಿದ ದೃಶ್ಯ ವೀಡಿಯೋದಲ್ಲಿದೆ.
ಘಟನೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತು. ‘ಭಾರತದ ಪ್ರಜೆಗಳಾದ ನಾವು’ ಅಂತ ಕರೆದು ದಾಳಿ ನಡೆಸಿದ್ದಾರೆ ಎಂದು ಕಾಂಗ್ರೆಸ್ ಅನ್ನು ದೂಷಿಸಿತು.
‘ಕಾಂಗ್ರೆಸ್ ಕಾರ್ಯಕರ್ತರಿಗೆ ನಾಚಿಕೆಯಾಗಬೇಕು! ಭಾರತದ ಪ್ರಜೆಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಘೋಷಣೆಗಳನ್ನು ಕೂಗಿದಾಗ, ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಸುತ್ತುವರಿದು ಥಳಿಸಿದ್ದಾರೆ’ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಅವರು ವೀಡಿಯೋದೊಂದಿಗೆ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬುಧವಾರ ನಡೆದ ವಿರೋಧ ಪಕ್ಷದ ಪ್ರತಿಭಟನೆಗೆ ಸಂಬಂಧಿಸಿದಂತೆ ಮೂರು ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ಇನ್ನೂ ಹೆಚ್ಚಿನ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ಗುರುವಾರ ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೋಪ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ತಳ್ಳಾಟ-ನೂಕಾಟ ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ದುರ್ವರ್ತನೆ ತೋರಿದ ಆರೋಪಗಳಿಗೆ ಸಂಬಂಧಿಸಿದ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ಇಲ್ಲಿಯವರೆಗೆ ದಾಖಲಾಗಿರುವ ಎಫ್ಐಆರ್ಗಳ ವಿವರಗಳಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೆಸರುಗಳೂ ಸೇರಿವೆ.








