

ಹೊಸದಿಲ್ಲಿ: ಇಂದಿನ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ಗಳು ಮತ್ತು ಇಂಟರ್ನೆಟ್ ಸಂಪರ್ಕವಿರದ ಪೊಲೀಸ್ ಠಾಣೆಗಳು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯವು, ಪ್ರತಿ ಪೊಲೀಸ್ ಠಾಣೆಯನ್ನು ಮೂಲಭೂತ ಡಿಜಿಟಲೀಕರಣ ಸೌಲಭ್ಯಗಳೊಂದಿಗೆ ಸಜ್ಜುಗೊಳಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಟ್ಟುನಿಟ್ಟಾದ ಒಂದು ತಿಂಗಳ ಗಡುವು ವಿಧಿಸಿದೆ.ಇದೇ ಗಡುವಿನೊಳಗೆ ಮಕ್ಕಳ ಕಲ್ಯಾಣ ಸಮಿತಿಗಳನ್ನೂ ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವಂತೆ ನ್ಯಾಯಮೂರ್ತಿಗಳಾದ ಅಹ್ವಾನುದ್ದೀನ್ ಅಮಾನುಲ್ಲಾ ಮತ್ತು ಆರ್. ಮಹಾದೇವನ್ ಅವರ ಪೀಠ ಆದೇಶಿಸಿದೆ.


ತಡೆರಹಿತ ಡಿಜಿಟಲ್ ದಾಖಲೆ ನಿರ್ವಹಣೆ, ಪ್ರಥಮ ವರ್ತಮಾನ ವರದಿಗಳನ್ನು (ಎಫ್‌ಐಆರ್) ಕ್ಷಿಪ್ರವಾಗಿ ಅಪ್‌ಲೋಡ್ ಮಾಡುವುದು ಮತ್ತು ಪೊಲೀಸ್ ದತ್ತಾಂಶವನ್ನು ಮಕ್ಕಳ ರಕ್ಷಣೆ ಹಾಗೂ ಕಳ್ಳಸಾಗಣೆ ವಿರೋಧಿ ಪೋರ್ಟಲ್ ಗಳೊಂದಿಗೆ ಜೋಡಿಸುವುದಕ್ಕಾಗಿ ಸರ್ವೋಚ್ಚ ನ್ಯಾಯಾಲಯ ನಿರ್ದೇಶನಗಳನ್ನು ನೀಡಿದೆ.ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿಗಳು, ಗೃಹ ಕಾರ್ಯದರ್ಶಿಗಳು, ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಕಾರ್ಯದರ್ಶಿಗಳು ಈ ನಿರ್ದೇಶನಗಳ ಪಾಲನೆಯನ್ನು ನೇರವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ.ತಾಂತ್ರಿಕ ಅವಶ್ಯಕತೆಗಳನ್ನು ಪೂರೈಸಲು ಅಗತ್ಯ ಹಣವನ್ನು ತಕ್ಷಣವೇ ಮಂಜೂರು ಮಾಡಿ ಬಿಡುಗಡೆ ಮಾಡುವಂತೆ ರಾಜ್ಯ ಸರಕಾರಗಳಿಗೆ ಆದೇಶಿಸಿದೆ.
ಪ್ರತಿ ಎಫ್‌ಐಆರ್ ಅನ್ನು ಸ್ಥಳೀಯ ಕಂಪ್ಯೂಟರ್‌ನಲ್ಲಿ ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕು. ಬಳಿಕ ಇಂಟರ್ನೆಟ್ ಮೂಲಕ ಸಂಬಂಧಿತ ರಾಜ್ಯ ಪೋರ್ಟಲ್ (ಇದ್ದರೆ) ಮತ್ತು ಅಪರಾಧ ಮತ್ತು ಅಪರಾಧಿಗಳ ಟ್ಯಾಕಿಂಗ್ ನೆಟ್‌ವರ್ಕ್ ಮತ್ತು ವ್ಯವಸ್ಥೆಗಳಿಗೆ (ಸಿಸಿಟಿಎನ್‌ಎಸ್) ರವಾನಿಸಬೇಕು ಎಂದು ಪೀಠ ತಿಳಿಸಿದೆ. ಪೊಲೀಸ್ ಠಾಣೆಗಳ ಅಪೂರ್ಣ ಡಿಜಿಟಲೀಕರಣವನ್ನು ಸಿಸಿಟಿಎನ್‌ಎಸ್ ಅಧಿಕಾರಿಗಳು ನೆಪವಾಗಿ ಉಲ್ಲೇಖಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.ಸಿಸಿಟಿಎನ್‌ಎಸ್ 2.0ಕ್ಕೆ ದತ್ತಾಂಶದ ಸುಗಮ ಹರಿವಿಗಾಗಿ ಎಲ್ಲ ರಾಷ್ಟ್ರೀಯ ಮತ್ತು ರಾಜ್ಯ ಪೋರ್ಟಲ್‌ಗಳ ಏಕೀಕರಣವನ್ನು ಸಾಧಿಸುವಂತೆ ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕಕ್ಕೂ (ಎನ್‌ಸಿಆರ್‌ಬಿ) ನ್ಯಾಯಾಲಯ ನಿರ್ದೇಶನ ನೀಡಿದೆ.
2011ರಲ್ಲಿ ಚೆನ್ನೈನಿಂದ ನಾಪತ್ತೆಯಾದ ತನ್ನ ಮಗಳನ್ನು ಪತ್ತೆಹಚ್ಚುವಂತೆ ಆಕೆಯ ತಂದೆ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದ ಎಸ್. ಗಣೇಶ ವಿರುದ್ಧ ತಮಿಳುನಾಡು ಸರಕಾರ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯ ಈ ನಿರ್ದೇಶನಗಳನ್ನು ನೀಡಿದೆ.
ನಾಪತ್ತೆಯಾದ ವ್ಯಕ್ತಿಗಳ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸುವಂತೆ ನೀಡಿರುವ ನಿರ್ದೇಶನಗಳಿಗೆ ಈ ಪ್ರಕರಣ ಸಂಬಂಧಿಸಿದೆ. ಕಾಣೆಯಾದ ಮಹಿಳೆಯರು ಮತ್ತು ಮಕ್ಕಳ ಪತ್ತೆ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಕಾನೂನು ಜಾರಿ ವ್ಯವಸ್ಥೆಯ ಮೂಲಸೌಕರ್ಯದಲ್ಲಿ ವ್ಯವಸ್ಥಿತ ಸುಧಾರಣೆಗಳನ್ನು ತರಬೇಕೆಂದು ಈ ಪ್ರಕರಣದಲ್ಲಿ ಕೋರಲಾಗಿದೆ.








