Sunday, October 25, 2026
spot_imgspot_img
spot_imgspot_img

ಪ್ರಧಾನಿ ಭದ್ರತಾ ಲೋಪದ ಪೋಸ್ಟ್‌ನಲ್ಲಿ ಇಂದಿರಾ ಹತ್ಯೆ ಉಲ್ಲೇಖಿಸಿ ವಿವಾದಾತ್ಮಕ ಕಮೆಂಟ್; ರ‍್ಯಾಪಿಡೋ ರೈಡರ್ ವೇಷದಲ್ಲಿದ್ದ ಉಗ್ರನ ಬಂಧನ

- Advertisement -
- Advertisement -

ಮುಂಬೈ : ಮುಂಬೈನ ಮಾಹಿಮ್‌ನಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿರೋಧಕ ದಳ ನಡೆಸಿದ ಕಾರ್ಯಾಚರಣೆಯಲ್ಲಿ, ನಿಷೇಧಿತ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪದ ಕುರಿತಾದ ಪೋಸ್ಟ್‌ ಅಡಿಯಲ್ಲಿ ಇಂದಿರಾ ಗಾಂಧಿ ಹತ್ಯೆಯನ್ನು ಉಲ್ಲೇಖಿಸಿ ವಿವಾದಾತ್ಮಕ ಕಮೆಂಟ್ ಮಾಡಿದ್ದ ಮೊಹಮ್ಮದ್ ಹಸನ್ ಅಬು ಸರ್ಮದ್ ಅಖ್ತರ್ (33) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಮೊಹಮ್ಮದ್ ಹಸನ್ ಅಬು ಸರ್ಮದ್ ಅಖ್ತರ್ ಮುಂಬೈನಲ್ಲಿ ನೆಪಕ್ಕೆ ರ‍್ಯಾಪಿಡೋ ಬೈಕ್ ರೈಡರ್ ಆಗಿ ಹಾಗೂ ಸುಗಂಧ ದ್ರವ್ಯ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದ. ಆದರೆ ಇದು ಆತನ ಮೂಲ ಉದ್ದೇಶಗಳಿಗೆ ಕೇವಲ ಒಂದು ಮುಸುಕಾಗಿತ್ತು ಎಂದು ತನಿಖಾ ಸಂಸ್ಥೆಗಳು ತಿಳಿಸಿವೆ.

ಜೊತೆಗೆ, ಪ್ರಧಾನಿ ನರೇಂದ್ರ ಮೋದಿ ಅವರ ಮುಂಬೈ ಭೇಟಿಯ ವೇಳೆ ಉಂಟಾಗಿದ್ದ ಭದ್ರತಾ ಲೋಪಕ್ಕೆ ಸಂಬಂಧಿಸಿದ ಇನ್‌ಸ್ಟಾಗ್ರಾಮ್ ಸುದ್ದಿಯೊಂದರಲ್ಲಿ ಆತ ಸೆಪ್ಟೆಂಬರ್ 8 ರಂದು ಕಮೆಂಟ್ ಮಾಡಿದ್ದ. ಅದರಲ್ಲಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯನ್ನು ಉಲ್ಲೇಖಿಸಿ, ಮೋದಿ ಅವರ ಹತ್ಯೆಗೆ ಪ್ರಚೋದನೆ ನೀಡುವಂತಹ ಸಂದೇಶವನ್ನು ಆತ ಬರೆದಿದ್ದ ಎಂದು ಎಟಿಎಸ್ ದಾಖಲಿಸಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈತ ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದ್ದು, ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಗ್ರೂಪ್‌ಗಳನ್ನು ಸೃಷ್ಟಿಸಿ ಯುವಕರನ್ನು ಸೇರಿಸುತ್ತಿದ್ದ. ಅದರಲ್ಲೂ, ಜೈಶ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನ ಪ್ರಚೋದನಾತ್ಮಕ ಭಾಷಣಗಳ ಆಡಿಯೋ ಕ್ಲಿಪ್‌ಗಳನ್ನು ಆತ ಗ್ರೂಪ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದ. ಅದರಂತೆ, ಮಾಹಿಮ್ ಮೆಟ್ರೋ ನಿಲ್ದಾಣದ ಬಳಿ ಎಟಿಎಸ್‌ನ ಕಾಲಾಚೌಕಿ ಘಟಕವು ಸಿಕ್ಕ ಖಚಿತ ಮಾಹಿತಿ ಮೇರೆಗೆ ಈತನನ್ನು ವಶಕ್ಕೆ ಪಡೆದು ತನಿಖೆ ನಡೆಸಿತ್ತು.

ತದನಂತರ ಆತನನ್ನು ಮಾಹಿಮ್ ಪೊಲೀಸರಿಗೆ ಒಪ್ಪಿಸಲಾಗಿದ್ದು, ಪೊಲೀಸರು ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 196(1) ರ ಅಡಿಯಲ್ಲಿ (ಕೋಮು ಸೌಹಾರ್ದತೆಗೆ ಧಕ್ಕೆ ತರುವುದು ಮತ್ತು ದ್ವೇಷ ಬಿತ್ತುವುದು) ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!