Tuesday, October 27, 2026
spot_imgspot_img
spot_imgspot_img

ಸ್ಟಿಂಗ್ ಆಪರೇಷನ್ ಹಿಂದೆ ನಮ್ಮ ಪಕ್ಷದವರ ಕೈವಾಡ- ವಿಡಿಯೋದಲ್ಲಿರುವ ಮಹಿಳೆ ಪುತ್ತೂರು ಟಿಕೆಟ್ ಆಕಾಂಕ್ಷಿ! -ಯತೀಂದ್ರ ಸಿದ್ದರಾಮಯ್ಯ

- Advertisement -
- Advertisement -

ಮೈಸೂರು : ನನ್ನ ತಂದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರತೇಜೋವಧೆ ಮತ್ತು ಬ್ಲಾಕ್‌ಮೇಲ್ ಮಾಡಲು ನಮ್ಮ ಪಕ್ಷದವರು ‘ಸ್ಟಿಂಗ್ ಆಪರೇಷನ್’ ನಲ್ಲಿ ಶಾಮೀಲಾಗಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ ಎಂದು ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ ನೀಡಿದ್ದಾರೆ.ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಟಿಂಗ್‌ ಆಪರೇಷನ್ ಸಂಬಂಧ ಈಗಾಗಲೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣ ಕುರಿತು ಸಮಗ್ರ ತನಿಖೆ ನಡೆದು ಸತ್ಯ ಹೊರಬರಬೇಕು. ಒಂದು ವೇಳೆ ನಿರೀಕ್ಷಿತ ಮಟ್ಟದಲ್ಲಿ ತನಿಖೆ ನಡೆಯದಿದ್ದರೆ ಮುಂದಿನ ಕ್ರಮಗಳ ಬಗ್ಗೆ ಯೋಚಿಸುವುದಾಗಿ ಹೇಳಿದರು.ಸ್ಟಿಂಗ್ ಆಪರೇಷನ್ ವೀಡಿಯೋ ಗಮನಿಸಿದರೆ ಮೇಲ್ನೋಟಕ್ಕೆ ಸಿದ್ದರಾಮಯ್ಯ ಅವರನ್ನು ಬ್ಲಾಕ್‌ಮೇಲ್ ಮಾಡಲು ನಮ್ಮ ಪಕ್ಷದವರೂ ಮಾಧ್ಯಮ ಸಂಸ್ಥೆ ಮುಖ್ಯಸ್ಥರು, ಓರ್ವ ಮಹಿಳೆ ಶಾಮೀಲಾಗಿರುವುದು ತಿಳಿದು ಬರುತ್ತದೆ. ಈ ಸ್ಟಿಂಗ್ ಆಪರೇಷನ್ ಹಿಂದೆ ಯಾರು ಇದ್ದಾರೆ, ನಮ್ಮ ಪಕ್ಷದವರೇ ಮಾಡಿದ್ದಾರೆಯೇ ಅಥವಾ ಬೇರೆಯವರ ಕೈವಾಡವಿದೆಯೇ ಎಂಬುದು ತನಿಖೆಯಿಂದ ಹೊರಬರಬೇಕು ಎಂದು ಅವರು ಹೇಳಿದರು.ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಇಡೀ ಪಕ್ಷವನ್ನು ದೂಷಿಸಲು ಸಾಧ್ಯವಿಲ್ಲ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆಯೊಬ್ಬರು ಪುತ್ತೂರು ಟಿಕೆಟ್ ಆಕಾಂಕ್ಷಿಯಾಗಿದ್ದರು ಎಂಬ ಮಾಹಿತಿ ಇದೆ.

ಹಾಗಾಗಿ, ರಾಜಕೀಯ ಲಾಭಕ್ಕಾಗಿ ಮತ್ತು ಸಿದ್ದರಾಮಯ್ಯ ಹೆಸರನ್ನು ಕೆಡಿಸಲು ಈ ರೀತಿಯ ಕೃತ್ಯಕ್ಕೆ ಮುಂದಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.ಸಿದ್ದರಾಮಯ್ಯ ಘನತೆಯನ್ನು ಹಾಳುಮಾಡಲು, ಅವರ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆ ಇಡಲು ಮತ್ತು ಬ್ಲಾಕ್‌ಮೇಲ್ ಮಾಡಲು ಈ ಯತ್ನ ನಡೆದಿದೆ ಎಂದು ಯತೀಂದ್ರ ಆರೋಪಿಸಿದರು.ಈ ಸುಳ್ಳು ಆರೋಪಗಳಿಂದ ನಮ್ಮತಂದೆ ಸಿದ್ದರಾಮಯ್ಯ ಅವರು ತೀವ್ರ ಬೇಸರಗೊಂಡಿದ್ದಾರೆ,

40 ವರ್ಷಗಳ ತಮ್ಮ ರಾಜಕೀಯ ಜೀವನದಲ್ಲಿ ಸಿದ್ದರಾಮಯ್ಯ ಎಂದಿಗೂ ಇಂತಹ ಕಳಂಕಕ್ಕೆ ಗುರಿಯಾಗಿಲ್ಲ. ತಮ್ಮ ರಾಜಕೀಯ ಜೀವನದ ಕೊನೆಯ ಹಂತದಲ್ಲಿ ಇಂತಹ ಗಂಭೀರ ಆರೋಪಗಳು ಕೇಳಿಬಂದಾಗ ಯಾರಾದರೂ ಬೇಸರಗೊಳ್ಳುವುದು ಸಹಜ. ಆದರೆ, ಸತ್ಯ ಅವರ ಕಡೆಯಿದೆ, ನಮ್ಮ ಕಡೆಯಿದೆ. ತನಿಖೆಯ ಮೂಲಕ ಸತ್ಯ ಹೊರಬರುತ್ತದೆ ಮತ್ತು ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿದೆ ಎಂದು ಯತೀಂದ್ರ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

- Advertisement -

Related news

error: Content is protected !!