


ಉಡುಪಿ : ಮಣಿಪಾಲದ ವಿದ್ಯಾ ರತ್ನ ನಗರದ ಮಾಂಡವಿ ಎಮರಾಲ್ಡ್ ಕಟ್ಟಡದ ಹಿಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಮಾರಕಾಸ್ತ್ರಗಳೊಂದಿಗೆ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಕಿನ್ನಿಮುಲ್ಕಿಯ ಮಾಂಡವಿ ಪ್ಯಾರಡೈಸ್ ನಿವಾಸಿ ಮಹಮ್ಮದ್ ಪರ್ವೇಜ್(26) ಬಂಧಿತ ಆರೋಪಿ.
ಆರೋಪಿಯಿಂದ 20 ಇಂಚು ಉದ್ದದ ನೀಲಿ ಬಣ್ಣದ ಹಿಡಿಕೆಯುಳ್ಳ ಕಬ್ಬಿಣದ ಲಾಂಗ್ ಹಾಗೂ 16 ಇಂಚು ಉದ್ದದ ಹಸಿರು ಬಣ್ಣದ ಹಿಡಿಕೆಯುಳ್ಳ ಕಬ್ಬಿಣದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಮಹಮ್ಮದ್ ಪರ್ವೇಜ್ ವಿರುದ್ಧ ಈಗಾಗಲೇ ಉಡುಪಿ ನಗರ, ಶಿರ್ವ, ಸೆನ್ ಹಾಗೂ ಮಂಗಳೂರಿನ ಕಾವೂರು ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು (ಡ್ರಗ್ಸ್) ಮಾರಾಟ ಮತ್ತು ಸೇವನೆಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ.
ವಿಚಾರಣೆ ವೇಳೆ ಆರೋಪಿ, “ನನಗೆ ದಾವೂದ್, ಇಸಾಕ್ ಹಾಗೂ ಗರುಡಾ ಗ್ಯಾಂಗ್‌ನ ಕೆಲವರೊಂದಿಗೆ ವೈಮನಸ್ಸಿದ್ದು, ಅವರ ಮೇಲೆ ಹಲ್ಲೆ ನಡೆಸುವ ಉದ್ದೇಶದಿಂದಲೇ ಈ ಆಯುಧಗಳನ್ನು ತಂದಿದ್ದೆ” ಎಂದು ಒಪ್ಪಿಕೊಂಡಿದ್ದಾನೆ.
ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮಾರಣಾಂತಿಕ ಆಯುಧಗಳನ್ನು ಇಟ್ಟುಕೊಂಡಿದ್ದಕ್ಕಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ವರದಿಯಿಂದ ತಿಳಿದುಬಂದಿದೆ.








