Thursday, October 29, 2026
spot_imgspot_img
spot_imgspot_img

ಔಷಧ, ವೈದ್ಯಕೀಯ ಉಪಕರಣಗಳ ಮೂಲ ದರ ಪ್ರಕಟಣೆ ಕಡ್ಡಾಯ: ಸರಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಖಾಸಗಿ ಆಸ್ಪತ್ರೆಗಳ ಅರ್ಜಿ

- Advertisement -
- Advertisement -

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಔಷಧಗಳು, ವೈದ್ಯಕೀಯ ಉಪಕರಣಗಳು ಹಾಗೂ ಬಳಕೆಯ ವಸ್ತುಗಳ ಮೂಲ ಖರೀದಿ ದರವನ್ನು ಬಹಿರಂಗವಾಗಿ ಪ್ರಕಟಿಸುವುದನ್ನು ಕಡ್ಡಾಯಗೊಳಿಸಿರುವ ರಾಜ್ಯ ಸರಕಾರದ ಕ್ರಮವನ್ನು ಪ್ರಶ್ನಿಸಿ ಖಾಸಗಿ ಆಸ್ಪತ್ರೆಗಳ ಪರವಾಗಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಖಾಸಗಿ ಆಸ್ಪತ್ರೆಗಳ ಪರವಾಗಿ ಡಾ. ಶೋಭಾ ಪ್ರಕಾಶ್ ಮತ್ತು ಡಾ. ಹಾಲಗೆರೆ ಮಲ್ಲಿಕಾರ್ಜುನ ಪ್ರಸನ್ನ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.ವಿಚಾರಣೆ ವೇಳೆ ಸರಕಾರದ ಪರ ವಕೀಲರು, ಸಂಬಂಧಿತ ಸುತ್ತೋಲೆಯನ್ನು ಸರಕಾರದ ಮಟ್ಟದಲ್ಲಿ ಮರುಪರಿಶೀಲಿಸುವ ಸಾಧ್ಯತೆಯಿದೆ. ಹೀಗಾಗಿ, ಅರ್ಜಿ ವಿಚಾರಣೆಯನ್ನು ಒಂದು ದಿನ ಮುಂದೂಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ಈ ಕುರಿತು ಸರಕಾರದ ನಿಲುವು ತಿಳಿಸುವಂತೆ ಹೆಚ್ಚುವರಿ ಸರಕಾರಿ ವಕೀಲರಿಗೆ ಸೂಚಿಸಿತು. ಸರಕಾರದ ನಿಲುವು ತಿಳಿದ ಬಳಿಕ ಸುತ್ತೋಲೆಗೆ ತಡೆ ನೀಡುವಂತೆ ಅರ್ಜಿದಾರರು ಸಲ್ಲಿಸಿರುವ ಮಧ್ಯಂತರ ಮನವಿಯನ್ನು ಪರಿಗಣಿಸಲಾಗುವುದು ಎಂದು ನ್ಯಾಯಪೀಠ ತಿಳಿಸಿತು

ಅಲ್ಲದೆ, ಅರ್ಜಿ ಸಂಬಂಧ ರಾಜ್ಯ ಸರಕಾರ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತರು ಹಾಗೂ ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆಖಾಸಗಿ ಆಸ್ಪತ್ರೆಗಳು ಮತ್ತು ಆರೋಗ್ಯ ಸಂಸ್ಥೆಗಳಲ್ಲಿ ನವೆಂಬರ್ 1ರಿಂದ ಅನ್ವಯವಾಗುವಂತೆ ಔಷಧಗಳು, ವೈದ್ಯಕೀಯ ಉಪಕರಣಗಳು ಹಾಗೂ ಬಳಕೆಯ ವಸ್ತುಗಳ ‘ಲ್ಯಾಂಡಿಂಗ್ ಬೇಸ್ ಪ್ರೈಸ್’ (ಆಮದು ಅಥವಾ ಖರೀದಿಯ ಮೂಲ ಬೆಲೆ) ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತರು ಅಕ್ಟೋಬರ್ 1ರಂದು ಸುತ್ತೋಲೆ ಹೊರಡಿಸಿದ್ದರು.

ಸರಕಾರದ ಈ ಸುತ್ತೋಲೆಯನ್ನೇ ಪ್ರಶ್ನಿಸಿರುವ ಖಾಸಗಿ ಆಸ್ಪತ್ರೆಗಳು, ಅದರ ಜಾರಿಗೆ ತಡೆ ನೀಡುವಂತೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿವೆ. ಅರ್ಜಿಯ ವಿಚಾರಣೆ ಮುಂದುವರಿದಿದ್ದು, ಈ ಕುರಿತು ಸರಕಾರದ ನಿಲುವು ಮಹತ್ವ ಪಡೆದಿದೆ.

- Advertisement -

Related news

error: Content is protected !!