Monday, November 2, 2026
spot_imgspot_img
spot_imgspot_img

ಸರ್ಕಾರಿ ಐಟಿಐ ವಿಟ್ಲದಲ್ಲಿ ಉದ್ಯೋಗ ಆಧಾರಿತ ಅಲ್ಪಾವಧಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

- Advertisement -
- Advertisement -

ವಿಟ್ಲ, ಕರ್ನಾಟಕ ಸರ್ಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಹಮ್ಮಿಕೊಂಡಿರುವ ಮುಖ್ಯಮಂತ್ರಿಗಳ 100 ದಿನಗಳ ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ), ವಿಟ್ಲದಲ್ಲಿ ವಿವಿಧ ವೃತ್ತಿ ವಿಭಾಗಗಳ ಉದ್ಯೋಗ ಆಧಾರಿತ ಅಲ್ಪಾವಧಿ ತರಬೇತಿ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ವಿಟ್ಲ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿ ಶ್ರೀ ಕರುಣಾಕರ. ಪಿ ಅವರು ಉದ್ಘಾಟಿಸಿ ಮಾತನಾಡಿ. ಇಂದಿನ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ತಾಂತ್ರಿಕ ಕೌಶಲ್ಯಗಳ ಮಹತ್ವವನ್ನು ವಿವರಿಸಿದರು. ಇಂತಹ ಅಲ್ಪಾವಧಿ ತರಬೇತಿಗಳು ಯುವಜನರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದರ ಜೊತೆಗೆ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಲಿವೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ವಿಶ್ವೇಶ್‌ವರ ಎಂಟರ್‌ಪ್ರೈಸಸ್‌ನ ಮಾಲೀಕರು ಹಾಗೂ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಶ್ರೀ ವಿರಾಜ್ ಅವರು ಮಾತನಾಡಿ, ಕೈಗಾರಿಕಾ ಕ್ಷೇತ್ರದಲ್ಲಿ ಕೌಶಲ್ಯಾಧಾರಿತ ತರಬೇತಿಯ ಅಗತ್ಯತೆ ಮತ್ತು ಉದ್ಯೋಗಾವಕಾಶಗಳ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಹರೀಶ್ ಅವರು ಮಾತನಾಡಿ, ಪ್ರಸ್ತುತ ಕೈಗಾರಿಕಾ ಕ್ಷೇತ್ರದಲ್ಲಿ ನುರಿತ ತಾಂತ್ರಿಕ ಕೌಶಲ್ಯ ಹೊಂದಿರುವ ಯುವಜನರಿಗೆ ಹೆಚ್ಚಿನ ಬೇಡಿಕೆಯಿದೆ. ವಿದ್ಯಾರ್ಥಿಗಳು ಕೇವಲ ಪ್ರಮಾಣಪತ್ರಕ್ಕೆ ಸೀಮಿತವಾಗದೆ, ಪ್ರಾಯೋಗಿಕ ಜ್ಞಾನ, ತಾಂತ್ರಿಕ ಪರಿಣತಿ ಹಾಗೂ ಉದ್ಯೋಗಕ್ಕೆ ಅಗತ್ಯವಿರುವ ಹೆಚ್ಚುವರಿ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಸರ್ಕಾರದ ಈ 100 ದಿನಗಳ ಕಾರ್ಯಕ್ರಮವು ಯುವಜನರಿಗೆ ಉದ್ಯೋಗದ ಹೊಸ ಅವಕಾಶಗಳನ್ನು ಕಲ್ಪಿಸುವ ಮಹತ್ವದ ಹೆಜ್ಜೆಯಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಂಸ್ಥೆಯ ವಿವಿಧ ವೃತ್ತಿ ವಿಭಾಗಗಳಲ್ಲಿ ಸುಮಾರು 240 ಗಂಟೆಗಳ ಅವಧಿಯ ಉದ್ಯೋಗ ಆಧಾರಿತ ಅಲ್ಪಾವಧಿ ತರಬೇತಿಯನ್ನು ಆಯೋಜಿಸಲಾಗಿದ್ದು, ಯುವಜನರಿಗೆ ಉದ್ಯೋಗಕ್ಕೆ ಅಗತ್ಯವಿರುವ ಪ್ರಾಯೋಗಿಕ ಹಾಗೂ ತಾಂತ್ರಿಕ ಕೌಶಲ್ಯಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ವೇದಿಕೆಯಲ್ಲಿ ಪ್ರಭಾರ ತರಬೇತಿ ಅಧಿಕಾರಿ ಶ್ರೀಮತಿ ರತಿ ವಿ ಉಪಸ್ಥಿತರಿದ್ದರು. ಶ್ರೀಮತಿ ಪ್ರಫುಲ್ಲಾ ಕೆ ಎನ್ ಸಂಯೋಜಿಸಿದ ಕಾರ್ಯಕ್ರಮವನ್ನು ಶ್ರೀ ಜಯಂತ್ ಅಜೇರು ನಿರೂಪಿಸಿದರು. ಶ್ರೀಮತಿ ರತಿ ವಿ ಸ್ವಾಗತಿಸಿ ಹಾಗೂ ಶ್ರೀ ಶರತ್ ಕುಮಾರ್ ಎಸ್.ಎಚ್.ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದ ಉಪಸ್ಥಿತ ರಿದ್ದರು.

- Advertisement -

Related news

error: Content is protected !!