

ಭಟ್ಕಳ: ಮಿಚಿಗನ್ನಲ್ಲಿ ನಡೆದ ಅಮೆರಿಕ ಸೆನೆಟ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ ಅಬ್ದುಲ್ ರೆಹಮಾನ್ ಮೊಹಮ್ಮದ್ ಎಲ್-ಸಯೀದ್ ಅವರಿಗೆ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದೊಂದಿಗೆ ಕೌಟುಂಬಿಕ ನಂಟಿರುವುದು ಸ್ಥಳೀಯರಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಭಟ್ಕಳ ಮೂಲದ ಕುಟುಂಬದ ಹೆಣ್ಣುಮಗಳನ್ನು ವಿವಾಹವಾಗಿರುವ ಅವರು ಇದೀಗ ‘ಭಟ್ಕಳದ ಅಳಿಯ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಎಲ್-ಸಯೀದ್ ಅವರು ಅಂದಿನ ಮುಖ್ಯಮಂತ್ರಿ ಬಿ.ಡಿ. ಜತ್ತಿ ನೇತೃತ್ವದ ಮೈಸೂರು ರಾಜ್ಯ ಸರ್ಕಾರದಲ್ಲಿ ಹಣಕಾಸು ಸಹಾಯಕ ಸಚಿವರಾಗಿದ್ದ, ಭಟ್ಕಳದ ಮೊದಲ ವಕೀಲರೆಂಬ ಖ್ಯಾತಿಯ ಜೆ.ಎಚ್. ಶಂಶುದ್ದೀನ್ ಅವರ ಮೊಮ್ಮಗಳು ಡಾ. ಸಾರಾ ಜುಕಾಕೊ ಅವರನ್ನು ವಿವಾಹವಾಗಿದ್ದಾರೆ.

ಡಾ. ಸಾರಾ ಅವರ ತಂದೆ ಡಾ. ತಯೇಬ್ ಜುಕಾಕೊ ಅವರು ಮೂತ್ರಪಿಂಡ ತಜ್ಞರಾಗಿದ್ದರು. 1976ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದ ಅವರು, ಬಳಿಕ ವಿದೇಶದಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಿದ್ದರು. 1980ರ ದಶಕದಲ್ಲಿ ಅಮೆರಿಕಕ್ಕೆ ವಲಸೆ ಹೋಗಿ ಅಲ್ಲಿಯೇ ನೆಲೆಸಿದ್ದರು.ಸಾರಾ ಅವರು ಅಮೆರಿಕದಲ್ಲಿಯೇ ಬೆಳೆದಿದ್ದರೂ, ತಮ್ಮ ಮಕ್ಕಳಿಗೆ ಮೂಲ ನೆಲೆಯೊಂದಿಗಿನ ಸಂಬಂಧ ಉಳಿಯಬೇಕು ಎಂಬ ಉದ್ದೇಶದಿಂದ ಡಾ. ತಯೇಬ್ ಅವರು ಕುಟುಂಬದವರನ್ನು ಆಗಾಗ್ಗೆ ಭಟ್ಕಳ ಮತ್ತು ಬೆಂಗಳೂರಿಗೆ ಕರೆತರುತ್ತಿದ್ದರು. ಜುಕಾಕೊ ಕುಟುಂಬದ ಹಲವು ಸದಸ್ಯರು ಇಂದಿಗೂ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.ಡಾ. ಸಾರಾ ಮತ್ತು ಎಲ್-ಸಯೀದ್ ಅವರು ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಬಳಿಕ 2006ರಲ್ಲಿ ವಿವಾಹವಾದ ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.ಸಾರಾ ಅವರ ಸೋದರ ಸಂಬಂಧಿಯೊಬ್ಬರು ತಿಳಿಸಿರುವಂತೆ, ಈ ಕುಟುಂಬ ಇಂದಿಗೂ ಭಟ್ಕಳದೊಂದಿಗೆ ನಿಕಟ ಸಂಪರ್ಕ ಹೊಂದಿದೆ.
ಕುಟುಂಬದ ವಿವಿಧ ಸಮಾರಂಭಗಳಲ್ಲಿ ಭಾಗವಹಿಸಲು ಸಾರಾ ಹಲವು ಬಾರಿ ಭಟ್ಕಳ ಮತ್ತು ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಸುಮಾರು ಏಳು ವರ್ಷಗಳ ಹಿಂದೆ ಕುಟುಂಬದ ಇತರ ಸದಸ್ಯರೊಂದಿಗೆ ಕೊನೆಯ ಬಾರಿಗೆ ಭಟ್ಕಳಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದೆ.ವಿದೇಶದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಎಲ್-ಸಯೀದ್ ಅವರಿಗೆ ಭಟ್ಕಳದೊಂದಿಗೆ ಇಂತಹ ಆತ್ಮೀಯ ಕೌಟುಂಬಿಕ ನಂಟಿರುವುದು ಸ್ಥಳೀಯರಿಗೆ ಹೆಮ್ಮೆಯ ಸಂಗತಿಯಾಗಿದೆ.








