Sunday, November 8, 2026
spot_imgspot_img
spot_imgspot_img

‘ಭಾರತ ರತ್ನ’ ಎಲ್.ಕೆ ಅಡ್ವಾಣಿಗೆ ಜನ್ಮಶತಮಾನೋತ್ಸವ ಸಂಭ್ರಮ: ಪ್ರಧಾನಿ ಮೋದಿಯಿಂದ ವಿಶೇಷ ಲೇಖನದ ಮೂಲಕ ಗೌರವ

- Advertisement -
- Advertisement -

ನವದೆಹಲಿ: ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರ ಜನ್ಮದಿನದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಲೇಖನದ ಮೂಲಕ ಗೌರವ ಸಲ್ಲಿಸಿದ್ದಾರೆ. ಅಡ್ವಾಣಿ ಅವರ ರಾಜಕೀಯ ಪಯಣ, ಬಿಜೆಪಿಯ ಬೆಳವಣಿಗೆಯಲ್ಲಿ ಅವರ ಕೊಡುಗೆ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗಿನ ಒಡನಾಟ ಹಾಗೂ ಭಾರತೀಯ ರಾಜಕೀಯದ ಮೇಲೆ ಬೀರಿದ ಪ್ರಭಾವವನ್ನು ಸ್ಮರಿಸಿದ್ದಾರೆ.

1927ರ ನವೆಂಬರ್ 8ರಂದು ಕರಾಚಿಯಲ್ಲಿ ಜನಿಸಿದ ಎಲ್.ಕೆ. ಅಡ್ವಾಣಿ ಭಾನುವಾರ 99ನೇ ವರ್ಷಕ್ಕೆ ಕಾಲಿಟ್ಟಿದ್ದು, ತಮ್ಮ ಜೀವನದ 100ನೇ ವರ್ಷವನ್ನು ಪ್ರವೇಶಿಸಿದ್ದಾರೆ. 1947ರ ದೇಶ ವಿಭಜನೆಯ ಸಂದರ್ಭದಲ್ಲಿ ಸಿಂಧ್ ತೊರೆದು ಭಾರತಕ್ಕೆ ಬರಬೇಕಾದ ಪರಿಸ್ಥಿತಿ ಎದುರಾದರೂ, ಹೊಸ ಜೀವನ ಆರಂಭಿಸಿ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು ಎಂದು ಮೆಲುಕು ಹಾಕಿದರು.

ಆರ್‌ಎಸ್‌ಎಸ್ ಪ್ರಚಾರಕರಾಗಿ ರಾಜಕೀಯ ಜೀವನ ಆರಂಭಿಸಿದ ಅಡ್ವಾಣಿ, ಜನಸಂಘದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ ಭಾರತೀಯ ಜನತಾ ಪಕ್ಷದ ಸಂಘಟನೆಯನ್ನು ಬಲಪಡಿಸುವಲ್ಲಿ ಮಹತ್ವದ ಕೊಡುಗೆ ನೀಡಿದರು. ಅವರ ಜೀವನವು ಆಧುನಿಕ ಭಾರತದ ಹಲವು ಪ್ರಮುಖ ರಾಜಕೀಯ ಅಧ್ಯಾಯಗಳೊಂದಿಗೆ ಬೆಸೆದುಕೊಂಡಿದೆ ಎಂದು ಬಣ್ಣಿಸಿದರು.

ತಮ್ಮ 14ನೇ ವಯಸ್ಸಿನಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್‌ಎಸ್‌ಎಸ್) ಸೇರುವ ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿದರು. ಆರ್‌ಎಸ್‌ಎಸ್ ಕಾರ್ಯಕರ್ತರಾಗಿ ಆರಂಭವಾದ ಅವರ ರಾಜಕೀಯ ಪಯಣ ಬಳಿಕ ಭಾರತೀಯ ಜನಸಂಘದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಹಂತಕ್ಕೆ ತಲುಪಿತು. 1980ರಲ್ಲಿ ಬಿಜೆಪಿ ಸ್ಥಾಪನೆಯಾದ ಬಳಿಕ ಪಕ್ಷದ ಸಂಘಟನೆ ಮತ್ತು ಬೆಳವಣಿಗೆಗೆ ಶ್ರಮಿಸಿದರು. ಹಲವು ಬಾರಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ದಶಕಗಳ ಕಾಲ ಕೆಲಸ ಮಾಡಿ ಪಕ್ಷವನ್ನು ರಾಷ್ಟ್ರಮಟ್ಟದಲ್ಲಿ ಬಲಿಷ್ಠಗೊಳಿಸಿದರು.

1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದ ಸಂದರ್ಭದಲ್ಲಿ ಅಡ್ವಾಣಿ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ಬಂಧನಕ್ಕೊಳಗಾಗಿದ್ದರು. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳ ರಕ್ಷಣೆಗಾಗಿ ನಡೆದ ಹೋರಾಟದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ ಜನತಾ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವರಾಗಿ ಸೇವೆ ಸಲ್ಲಿಸಿದರು. 1990ರಲ್ಲಿ ಗುಜರಾತ್‌ನ ಸೋಮನಾಥದಿಂದ ಉತ್ತರ ಪ್ರದೇಶದ ಅಯೋಧ್ಯೆಯವರೆಗೆ ಅವರು ನಡೆಸಿದ ರಾಮ ರಥಯಾತ್ರೆ ಅವರ ರಾಜಕೀಯ ಜೀವನದ ಮಹತ್ವದ ಘಟ್ಟವಾಗಿ ಗುರುತಿಸಿಕೊಂಡಿದೆ. ರಾಮಮಂದಿರ ಚಳವಳಿಗೆ ರಾಷ್ಟ್ರಮಟ್ಟದಲ್ಲಿ ಹೆಚ್ಚಿನ ಗಮನ ಸೆಳೆದ ಈ ಯಾತ್ರೆ ದೇಶದ ರಾಜಕೀಯದ ಮೇಲೂ ಮಹತ್ವದ ಪ್ರಭಾವ ಬೀರಿತ್ತು. ಈ ಯಾತ್ರೆಯ ಯೋಜನೆ ಮತ್ತು ಅನುಷ್ಠಾನದ ಸಂದರ್ಭದಲ್ಲಿ ತಾವು ಅಡ್ವಾಣಿ ಅವರೊಂದಿಗೆ ಕೆಲಸ ಮಾಡಿದ್ದನ್ನು ಪ್ರಧಾನಿ ಮೋದಿ ತಮ್ಮ ಲೇಖನದಲ್ಲಿ ನೆನಪಿಸಿಕೊಂಡಿದ್ದಾರೆ. ದೀರ್ಘ ಪ್ರಯಾಣ, ನಿರಂತರ ಸಭೆಗಳು ಹಾಗೂ ದೈಹಿಕ ಆಯಾಸದ ನಡುವೆಯೂ ಅಡ್ವಾಣಿ ತೋರಿದ ಶಿಸ್ತು ಮತ್ತು ಸಹನಶಕ್ತಿಯನ್ನು ಶ್ಲಾಘಿಸಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಅಡ್ವಾಣಿ ಅವರು ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2002ರಿಂದ 2004ರವರೆಗೆ ಭಾರತದ ಉಪಪ್ರಧಾನಿಯಾಗಿಯೂ ಸೇವೆ ಸಲ್ಲಿಸಿದ್ದರು. ದೇಶದ ಆಂತರಿಕ ಭದ್ರತೆ ಹಾಗೂ ಭಯೋತ್ಪಾದನೆ ವಿರುದ್ಧದ ಕ್ರಮಗಳಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು. ಸುದೀರ್ಘ ರಾಜಕೀಯ ಜೀವನ, ಸಾರ್ವಜನಿಕ ಸೇವೆ ಮತ್ತು ದೇಶಕ್ಕೆ ನೀಡಿದ ಕೊಡುಗೆಗಳನ್ನು ಗುರುತಿಸಿ 2024ರಲ್ಲಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಅಡ್ವಾಣಿ ಅವರು ರಾಜಕಾರಣಿಯಾಗಿ ಮಾತ್ರವಲ್ಲದೆ ಓದು, ಬರವಣಿಗೆ, ಸಿನಿಮಾ ಮತ್ತು ರಂಗಭೂಮಿಯಲ್ಲೂ ಆಸಕ್ತಿ ಹೊಂದಿರುವ ವ್ಯಕ್ತಿ. ಪ್ರತಿದಿನ ಪತ್ರಿಕೆಗಳನ್ನು ಓದುವ ಅಭ್ಯಾಸ ಹೊಂದಿರುವ ಅವರು, ಚಲನಚಿತ್ರಗಳ ಕುರಿತು ವಿಮರ್ಶಾತ್ಮಕವಾಗಿ ಬರೆಯುತ್ತಿದ್ದರು. ಅವರ ಆತ್ಮಕಥನ ‘My Country My Life’ ನಲ್ಲಿ ತಮ್ಮ ಜೀವನದ ಹಲವು ಪ್ರಮುಖ ಅನುಭವಗಳನ್ನು ದಾಖಲಿಸಿದ್ದಾರೆ. ಸಿಂಧಿ ಸಂಸ್ಕೃತಿಯೊಂದಿಗಿನ ನಂಟನ್ನೂ ಉಳಿಸಿಕೊಂಡಿದ್ದಾರೆ.

ಪ್ರಧಾನಿ ಮೋದಿ ತಮ್ಮ ಲೇಖನದಲ್ಲಿ ಅಡ್ವಾಣಿ ಅವರ ಪತ್ನಿ ಕಮಲಾ ಅಡ್ವಾಣಿ ಅವರು ಸಾರ್ವಜನಿಕ ಜೀವನದುದ್ದಕ್ಕೂ ನೀಡಿದ ಬೆಂಬಲವನ್ನೂ ಸ್ಮರಿಸಿ, ಅಡ್ವಾಣಿ ಅವರು ಉತ್ತಮ ಆರೋಗ್ಯದಿಂದ ದೀರ್ಘಕಾಲ ಬಾಳಲಿ ಹಾಗೂ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿ ಎಂದು ಹಾರೈಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!