
ವಿಟ್ಲ: ಸರಕಾರದ ಮಹತ್ವಾಕಾಂಕ್ಷೆಯ ‘ಭೂಗ್ಯಾರಂಟಿ’ ಯೋಜನೆಯಡಿ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಲ್ಲಾ ವಸತಿ ಹಾಗೂ ವಾಣಿಜ್ಯ ಉದ್ದೇಶದ ಆಸ್ತಿಗಳಿಗೆ ಇ-ಖಾತಾ ನೋಂದಣಿ ಮಾಡಿಸಲು ಆಸ್ತಿ ಮಾಲೀಕರಿಗೆ ಸೂಚಿಸಲಾಗಿದೆ.ಆಸ್ತಿಗಳ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ಆನ್‌ಲೈನ್ ತಂತ್ರಾಂಶದ ಮೂಲಕ ಇ-ಖಾತಾ ದಾಖಲಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಇ-ಖಾತಾ ಹೊಂದುವುದರಿಂದ ಆಸ್ತಿಯ ಮಾಲೀಕತ್ವಕ್ಕೆ ಅಧಿಕೃತ ಪುರಾವೆ ದೊರೆಯುವುದರ ಜೊತೆಗೆ ಆಸ್ತಿ ಮಾರಾಟ ಮತ್ತು ವರ್ಗಾವಣೆ, ಬ್ಯಾಂಕ್ ಸಾಲ ಪಡೆಯುವುದು, ಆಸ್ತಿ ತೆರಿಗೆ ಪಾವತಿ ಹಾಗೂ ಕಟ್ಟಡ ಪರವಾನಿಗೆ, ನೀರು ಮತ್ತು ವಿದ್ಯುತ್ ಸಂಪರ್ಕ ಪಡೆಯುವುದು ಸುಲಭವಾಗಲಿದೆ. ಅಲ್ಲದೆ, ಆಸ್ತಿಯ ಮೌಲ್ಯ ಹೆಚ್ಚಳಕ್ಕೂ ಸಹಕಾರಿಯಾಗಲಿದೆ.ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಡೋರ್ ನಂಬರ್ ಹೊಂದಿರುವ ಎಲ್ಲಾ ಆಸ್ತಿಗಳ ಡ್ರಾಫ್ಟ್ ಖಾತಾವನ್ನು ಆಸ್ತಿ ಕಣಜ ತಂತ್ರಾಂಶದಲ್ಲಿ ದಾಖಲಿಸಲಾಗಿದೆ. ಸಾರ್ವಜನಿಕರು ತಮ್ಮ ಆಸ್ತಿಯ ಡ್ರಾಫ್ಟ್ ಖಾತಾವನ್ನು ಪರಿಶೀಲಿಸಿ, ಅಗತ್ಯ ದಾಖಲೆಗಳೊಂದಿಗೆ ಇ-ಖಾತಾ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಮಾಲೀಕತ್ವ ಸಾಬೀತುಪಡಿಸುವ ಹಕ್ಕುಪತ್ರ, ನೋಂದಾಯಿತ ವಿಭಾಗ ಪತ್ರ, ಕ್ರಯಸಾಧನ ಪತ್ರ ಅಥವಾ ದಾನಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ, ಮಾಲೀಕರ ಫೋಟೋ, ಆಸ್ತಿಯ ಫೋಟೋ ಹಾಗೂ ಮಾಲೀಕರ ಗುರುತಿನ ದಾಖಲೆ ಸಲ್ಲಿಸಬೇಕು. ಆಸ್ತಿ ವಹಿವಾಟು ನಡೆಸುವವರು ಪ್ರಸಕ್ತ ಸಾಲಿನವರೆಗಿನ ಋಣಭಾರ ಪ್ರಮಾಣ ಪತ್ರವನ್ನೂ ಒದಗಿಸಬೇಕಾಗಿದೆ.ಎಲ್ಲಾ ಆಸ್ತಿ ಮಾಲೀಕರು ತಮ್ಮ ಆಸ್ತಿಗಳಿಗೆ ಇ-ಖಾತಾ ನೋಂದಣಿ ಮಾಡಿಸುವಂತೆ ಪಟ್ಟಣ ಪಂಚಾಯತ್ ತಿಳಿಸಿದೆ.
ಅರ್ಜಿಗಳನ್ನು www.eaasthi.karnataka.gov.in ಪೋರ್ಟಲ್ ಮೂಲಕ ಸಲ್ಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ವಿಟ್ಲ ಪಟ್ಟಣ ಪಂಚಾಯತ್ ಸಹಾಯವಾಣಿ ಸಂಖ್ಯೆ 08255-239220 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.







