


ಕಡಬ: ಅಲಂಕಾರು ಗ್ರಾಮದ ನೆಕ್ಕರೆ ಎಂಬಲ್ಲಿ ಕಾರು ಹಾಗೂ ಹಣ್ಣು-ಹಂಪಲು ಸಾಗಾಟದ ಮಹೇಂದ್ರ ಜೀತಾ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಶನಿವಾರ(ನ.14) ಬೆಳಿಗ್ಗೆ ನಡೆದಿದೆ.
ಕಡಬ ಕಡೆಯಿಂದ ಉಪ್ಪಿನಂಗಡಿ ಕಡೆಗೆ KA21MA8490 ನೋಂದಣಿಯ ಕಾರನ್ನು ಅದರ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ, ಉಪ್ಪಿನಂಗಡಿ ಕಡೆಯಿಂದ ಕಡಬ ಕಡೆಗೆ ಹಣ್ಣು-ಹಂಪಲು ತುಂಬಿಸಿಕೊಂಡು ಬರುತ್ತಿದ್ದ KA21B2940 ನೋಂದಣಿಯ ಮಹೇಂದ್ರ ಜೀತಾ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಮಹೇಂದ್ರ ಜೀತಾ ವಾಹನದ ಚಾಲಕ ಖಲೀಲ್, ಸಹ ಪ್ರಯಾಣಿಕ ತಮೀಮ್ ಹಾಗೂ ಕಾರು ಚಾಲಕನಿಗೆ ಗಾಯಗಳಾಗಿವೆ. ಸ್ಥಳದಲ್ಲಿದ್ದವರು ಗಾಯಾಳುಗಳನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಆದರೆ ಮಹೇಂದ್ರ ಜೀತಾ ವಾಹನದ ಸಹ ಪ್ರಯಾಣಿಕ ತಮೀಮ್ ಅವರು ಆಸ್ಪತ್ರೆಗೆ ಕರೆತಂದಾಗ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 138/2026, ಕಲಂ 281, 125(a), 106 BNS-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







