

ಮಂಗಳೂರು, ನ.14: ಸುಮಾರು 20 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎರಡು ಎಲ್‌ಪಿಸಿ (LPC) ಪ್ರಕರಣಗಳ ವಾರಂಟ್ ಆರೋಪಿಯನ್ನು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಅವರ ಅಪರಾಧ ತಂಡ ಬಂಧಿಸಿದೆ.ಬಂಧಿತನನ್ನು ಮನೋಜ್ (44) ಎಂದು ಗುರುತಿಸಲಾಗಿದೆ.2005ರಲ್ಲಿ ನಡೆದ ಕೋಮು ಗಲಭೆಯ ಸಂದರ್ಭದಲ್ಲಿ ಹತ್ಯೆಯಾಗಿದ್ದ ಪೊಳಲಿ ಅನಂತು ಅವರ ಶವ ಮೆರವಣಿಗೆಯ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಬಜಪೆ ಪೊಲೀಸ್ ಠಾಣೆಯಲ್ಲಿ ಮನೋಜ್ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.


ಈ ಪ್ರಕರಣಗಳು 2007ರಲ್ಲಿ ಮಂಗಳೂರಿನ 3ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದ್ದವು.ಆದರೆ, ಆರೋಪಿ 2007ರಲ್ಲಿ ವಿದೇಶಕ್ಕೆ ತೆರಳಿದ್ದು, ಬಳಿಕ ವಿದೇಶದಿಂದ ಮರಳಿದರೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ 2016ರಲ್ಲಿ ಎಲ್‌ಪಿಸಿ ವಾರಂಟ್ ಹೊರಡಿಸಿತ್ತು.
ಪ್ರಸ್ತುತ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ಕೃಷ್ಣಬೆಟ್ಟು ಹೌಸ್‌ನಲ್ಲಿ ವಾಸವಾಗಿದ್ದ ಮನೋಜ್‌ನನ್ನು ನ.14ರಂದು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಅವರ ಅಪರಾಧ ತಂಡ ವಶಕ್ಕೆ ಪಡೆದುಕೊಂಡಿದೆ.
ಬಳಿಕ ಮುಂದಿನ ಕಾನೂನು ಕ್ರಮಕ್ಕಾಗಿ ಆತನನ್ನು ಬಜಪೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.







