


ವಿಟ್ಲ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನವೆಂಬರ್ 14ರಿಂದ 17ರವರೆಗೆ ನಡೆದ ಐದನೇ ಮಿನಿ ಕರ್ನಾಟಕ ಕ್ರೀಡಾಕೂಟ-2026ರ ಭಾರ ಎತ್ತುವ ಸ್ಪರ್ಧೆಯಲ್ಲಿ ವಿಟ್ಲದ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದು ದ್ವಿತೀಯ ತಂಡ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಶಾಲೆಯ ವಿದ್ಯಾರ್ಥಿಗಳು ಒಟ್ಟು ಆರು ಪದಕಗಳನ್ನು ಗೆದ್ದುಕೊಂಡಿದ್ದಾರೆ.90+ ಕೆ.ಜಿ. ವಿಭಾಗದಲ್ಲಿ ಬಿ. ವಿನೀತ್ ಕುಮಾರ್ ಹಾಗೂ 60 ಕೆ.ಜಿ. ವಿಭಾಗದಲ್ಲಿ ಜಿತಿನ್ ಎಸ್. ಪೂಂಜಾ ಚಿನ್ನದ ಪದಕ ಗಳಿಸುವ ಮೂಲಕ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ. 65 ಕೆ.ಜಿ. ವಿಭಾಗದಲ್ಲಿ ಬಿ. ಪ್ರಥಮ್ ಗೌಡ, 55 ಕೆ.ಜಿ. ವಿಭಾಗದಲ್ಲಿ ಯಶ್ವಿತ್ ಶೆಟ್ಟಿ ಬಿ. ಹಾಗೂ 40 ಕೆ.ಜಿ. ವಿಭಾಗದಲ್ಲಿ ಮನಸ್ವಿ ಆರ್.ಕೆ. ಬೆಳ್ಳಿ ಪದಕ ಗಳಿಸಿದ್ದಾರೆ. 75+ ಕೆ.ಜಿ. ವಿಭಾಗದಲ್ಲಿ ದಕ್ಷ ಎನ್.ಕೆ. ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಒಟ್ಟು ಎರಡು ಚಿನ್ನ, ಮೂರು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಸೇರಿದಂತೆ ಆರು ಪದಕಗಳನ್ನು ಗೆದ್ದ ತಂಡ ದ್ವಿತೀಯ ತಂಡ ಪ್ರಶಸ್ತಿಯನ್ನು ಪಡೆದು ಶಾಲೆಗೆ ಕೀರ್ತಿ ತಂದಿದೆ.ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಭಾನುಪ್ರಕಾಶ್ ವಿ.ಎ. ಅವರು ತರಬೇತಿ ನೀಡಿದ್ದು, ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.








