


ಪುಣಚ: ಬಂಟ್ವಾಳ ಪುಣಚ ಗ್ರಾಮದ ದಂಬೆ ಎಂಬಲ್ಲಿರುವ ಸಾರ್ವಜನಿಕ ತೋಡಿನಲ್ಲಿ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರ ವಿರುದ್ಧ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಿನಾಂಕ 19-11-2026 ರಂದು ಬೆಳಿಗ್ಗೆ ತೋಡಿನಿಂದ ಅಕ್ರಮವಾಗಿ ಮರಳು ತೆಗೆದು ಪಿಕಪ್ ವಾಹನಕ್ಕೆ ತುಂಬಿಸುತ್ತಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯ ತನಿಖೆ-1 ಪಿಎಸ್‌ಐ ರತ್ನಕುಮಾರ ಅವರಿಗೆ ಮಾಹಿತಿ ಬಂದಿತ್ತು. ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ನಾಲ್ಕು ಜನರು ಹೊಳೆಯಿಂದ ಮರಳು ತೆಗೆದು ಪಿಕಪ್ ವಾಹನಕ್ಕೆ ತುಂಬಿಸುತ್ತಿರುವುದು ಕಂಡುಬಂದಿದೆ. ಅವರನ್ನು ಹಿಡಿದು ವಿಚಾರಣೆ ನಡೆಸಿದಾಗ ಆರೋಪಿಗಳನ್ನು ಬಂಟ್ವಾಳ ಪುಣಚ ಗ್ರಾಮದ ನಿವಾಸಿಗಳಾದ ವಿಶ್ವಾಸ್ ಹೆಚ್ (27), ಶಶಿಧರ (45), ಹರೀಶ್ ಅಜ್ಜಿನಡ್ಕ (35) ಮತ್ತು ಕೇಪು ಗ್ರಾಮದ ಪುಷ್ಪರಾಜ್ ಎನ್ (32) ಎಂದು ಗುರುತಿಸಲಾಗಿದೆ.ಆರೋಪಿಗಳು ಯಾವುದೇ ಪರವಾನಿಗೆ ಹೊಂದದೇ ಅಕ್ರಮವಾಗಿ ಕೃತ್ಯವೆಸಗುತ್ತಿರುವುದು ಧೃಢಪಟ್ಟಿದೆ.
ಸ್ಥಳದಲ್ಲಿ ಮರಳು ತುಂಬಿದ್ದ KA-70-8785 ಪಿಕಪ್ ವಾಹನ ಹಾಗೂ ಇತರೆ ಸೊತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 236/2026, ಕಲಂ: KARNATAKA MINOR MINERAL CONSISTENT RULE 1994 U/S 3, 44, MMDR ACT 1957 U/S 4(1), 4(1A), BNS 2023 U/S 303(2) ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.








