


ಬೆಳಗಾವಿ: ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ಹಣದ ಆಸೆಗಾಗಿ ಮೊಮ್ಮಗನೊಬ್ಬ ಹೆತ್ತ ತಾಯಿಯ ಸಮಾನಳಾದ ಅಜ್ಜಿಯನ್ನೇ ಬರ್ಬರವಾಗಿ ಹತ್ಯೆಗೈದಿರುವ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ನಡೆದಿದೆ.
ಅರಳಿಕಟ್ಟಿ ಗ್ರಾಮದ ಹಮ್ಮವ್ವಾ ಸನದಿ (78) ಕೊಲೆಯಾದ ದುರ್ದೈವಿ ವೃದ್ಧೆ. ಕೃತ್ಯ ಎಸಗಿದ ಮೊಮ್ಮಗ ಭೀಮಪ್ಪ ಸನದಿ ಹಾಗೂ ಈ ಕೊಲೆ ವಿಷಯ ತಿಳಿದಿದ್ದರೂ ಮುಚ್ಚಿಡಲು ಯತ್ನಿಸಿದ ಆತನ ತಂದೆ ರಾಮಪ್ಪ ಸನದಿಯನ್ನು ಯಮಕನಮರಡಿ ಪೊಲೀಸರು ಬಂಧಿಸಿದ್ದಾರೆ.
ಕಳೆದ ನವೆಂಬರ್ 10ರಂದು ಈ ಭೀಕರ ಕೊಲೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಜ್ಜಿ ಹಮ್ಮವ್ವಾ ಅವರಿಗೆ ಬರುತ್ತಿದ್ದ ಗೃಹಲಕ್ಷ್ಮೀ ಯೋಜನೆಯ ಹಣಕ್ಕಾಗಿ ಮೊಮ್ಮಗ ಭೀಮಪ್ಪ ಪದೇ ಪದೇ ಕಿರಿಕ್ ಮಾಡುತ್ತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಅಜ್ಜಿಯನ್ನು ಮುಗಿಸಲು ಸಂಚು ರೂಪಿಸಿದ್ದ ಆತ, ನವೆಂಬರ್ 10ರಂದು ಅರಳಿಕಟ್ಟಿಯಿಂದ ಪಾಶ್ಚಾಪುರ ಸಂತೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ಅಜ್ಜಿಯನ್ನು ಕರೆದೊಯ್ದಿದ್ದಾನೆ.
ಮಾರ್ಗಮಧ್ಯೆ ಗವಿ ಸಿದ್ದೇಶ್ವರ ಗುಡ್ಡದ ಬಳಿ ಕರೆದೊಯ್ದು ಅಜ್ಜಿಯ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ವೃದ್ಧೆಯ ಶವವನ್ನು ಗೋಣಿಚೀಲದಲ್ಲಿ ತುಂಬಿ, ಅದಕ್ಕೆ ಭಾರವಾದ ಕಲ್ಲು ಕಟ್ಟಿ ಹಿಡಕಲ್ ಡ್ಯಾಂ ಹಿನ್ನೀರಿನಲ್ಲಿ ಬಿಸಾಡಿದ್ದಾನೆ.
ಕೊಲೆ ಮಾಡಿದ ಬಳಿಕ ಏನೂ ಅರಿಯದವನಂತೆ ನಟಿಸಿದ್ದ ಭೀಮಪ್ಪ, ಅಜ್ಜಿ ಕಾಣೆಯಾಗಿದ್ದಾರೆ ಎಂದು ಎಲ್ಲೆಡೆ ಹುಡುಕಾಟ ನಡೆಸುವ ನಾಟಕವಾಡಿದ್ದ. ಈ ನಡುವೆ ನವೆಂಬರ್ 15ರಂದು ಹಿಡಕಲ್ ಡ್ಯಾಂ ಹಿನ್ನೀರಿನಲ್ಲಿ ವೃದ್ಧೆಯ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ ಯಮಕನಮರಡಿ ಪೊಲೀಸರು, ಅನುಮಾನದ ಮೇಲೆ ಮೊಮ್ಮಗ ಭೀಮಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಮಗ ಭೀಮಪ್ಪ ಎಸಗಿದ ಈ ಘೋರ ಕೃತ್ಯದ ಬಗ್ಗೆ ತಂದೆ ರಾಮಪ್ಪನಿಗೆ ಮೊದಲೇ ತಿಳಿದಿತ್ತು. ಆದರೂ ಪೊಲೀಸರಿಗೆ ಮಾಹಿತಿ ನೀಡದೆ ವಿಷಯವನ್ನು ಮುಚ್ಚಿಟ್ಟಿದ್ದ ಕಾರಣಕ್ಕೆ ತಂದೆ ರಾಮಪ್ಪನನ್ನೂ ಪೊಲೀಸರು ಆರೋಪಿಯನ್ನಾಗಿ ಪರಿಗಣಿಸಿ, ತಂದೆ-ಮಗ ಇಬ್ಬರನ್ನೂ ಜೈಲಿಗಟ್ಟಿದ್ದಾರೆ ಎಂದು ತಿಳಿದು ಬಂದಿದೆ.








