ಇಡೀ ಹಿಂದೂ ಸಮಾಜವೇ ನರಸಿಂಹ ಮಾಣಿಯವರ ಜೊತೆಗಿದೆ- ನಳಿನ್ ಕುಮಾರ್ ಕಟೀಲು



ಪುತ್ತೂರು : ಹಿಂದೂ ಜಾಗರಣ ವೇದಿಕೆಯ ಮಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಸಂಯೋಜಕರಾದ ನರಸಿಂಹ ಮಾಣಿ ಅವರನ್ನು ಗಡಿಪಾರು ಮಾಡಿರುವ ಪೊಲೀಸ್ ಇಲಾಖೆಯ ಕ್ರಮವನ್ನು ಭಾರತೀಯ ಜನತಾ ಪಾರ್ಟಿ ಹಾಗೂ ಹಿಂದೂ ಜಾಗರಣಾ ವೇದಿಕೆ ತೀವ್ರವಾಗಿ ಖಂಡಿಸಿದ್ದು, ಇಂದು ನರಸಿಂಹ ಮಾಣಿ ಅವರ ಮನೆಗೆ ಮುಖಂಡರು ಭೇಟಿ ನೀಡಿ ಧೈರ್ಯ ತುಂಬಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಸಂಸದ ಹಾಗೂ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಬಿಜೆಪಿ ನಗರ ಮಂಡಲ ವ್ಯಾಪಾರ ಪ್ರಕೋಷ್ಠದ ಸಂಚಾಲಕ ಉಜ್ವಲ್ ಪ್ರಭು, ಹಿಂದೂ ಮುಖಂಡ ಮುರಳೀಕೃಷ್ಣ ಹಸಂತಡ್ಕ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಮೋಹನ್ದಾಸ್ ಕಾಣಿಯೂರು, ಸಹ ಸಂಚಾಲಕ ದಿನೇಶ್ ಪಂಜಿಗ, ಮನು ನರಿಮೊಗರು, ಪ್ರಾಂತ ಕಾರ್ಯಕಾರಿಣಿ ಸದಸ್ಯ ಪ್ರಶಾಂತ್ ಕೆಂಪುಗುಡ್ಡೆ ಮಂಗಳೂರು ಗ್ರಾಮಾಂತರ ಜಿಲ್ಲಾ ಪುಷ್ಪರಾಜ್ ಕಮ್ಮಾಜೆ, ರಾಜಾರಾಮ್ ಪ್ರಭು ಪುತ್ತೂರು ಸಹಿತ ಹಲವು ಉದ್ಯಮಿಗಳು, ಹಿಂದೂ ಮುಖಂಡರು ನರಸಿಂಹ ಮಾಣಿ ಅವರ ಮನೆಗೆ ಭೇಟಿ ನೀಡಿ ಅವರ ತಾಯಿಯಿಂದ ಮಾಹಿತಿ ಪಡೆದುಕೊಂಡು ಇಡೀ ಹಿಂದು ಸಮಾಜವೇ ನಿಮ್ಮಜೊತೆಗಿದೆಯೆಂದು ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಂಸದ, ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಇಡೀ ಹಿಂದೂ ಸಮಾಜವೇ ನರಸಿಂಹ ಮಾಣಿಯವರ ಜೊತೆಗಿದೆ. ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ತಕ್ಕ ಪಾಠ ಕಲಿಯಲಿದೆ. ಅನಿವಾರ್ಯವಾದರೆ ಎಲ್ಲಾ ಹಿಂದೂಗಳು ಬೀದಿಗಿಳಿದು ಹೋರಾಟ ಮಾಡುತ್ತೇವೆ. ಹಿಂದೂ ಸಮಾಜವನ್ನು ಸುಖಾಸುಮ್ಮನೆ ದ್ವೇಷಿಸಿದರೆ ಖಂಡಿತಾ ಸುಮ್ಮನಿರುವುದಿಲ್ಲ. ಹಿಂದೂ ಕಾರ್ಯಕರ್ತರು ಹಾಗೂ ಹಿಂದೂಪರ ಸಂಘಟನೆಗಳ ನಾಯಕರನ್ನು ಗುರಿಯಾಗಿಸಿಕೊಂಡು ಪೊಲೀಸ್ ಇಲಾಖೆ ನಿರಂತರವಾಗಿ ಇಂತಹ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಎಚ್ಚರಿಕೆ ನೀಡಿದರು.
ಇನ್ನು ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪೊಲೀಸ್ ಇಲಾಖೆಯ ಈ ನಡೆ ಹಿಂದೂ ವಿರೋಧಿಯಾಗಿದ್ದು, ಕಾಂಗ್ರೆಸ್ ಕುಮ್ಮಕ್ಕು ಹೆಚ್ಚು ದಿನ ನಡೆಯಲಾರದು. ಪೊಲೀಸ್ ಇಲಾಖೆಯು ಯಾವುದೇ ರಾಜಕೀಯ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೆ ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವುದು ಇಲಾಖೆಯ ಪ್ರಮುಖ ಜವಾಬ್ದಾರಿಯಾಗಿದ್ದು, ಯಾವುದೇ ಸಂಘಟನೆ ಅಥವಾ ವ್ಯಕ್ತಿಯ ವಿರುದ್ಧ ಪೂರ್ವಾಗ್ರಹದಿಂದ ವರ್ತಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಪುತ್ತೂರು ಬಿಜೆಪಿ ನಗರ ಮಂಡಲ ವ್ಯಾಪಾರ ಪ್ರಕೋಷ್ಠದ ಸಂಚಾಲಕ ಉಜ್ವಲ್ ಪ್ರಭು ಅವರು ನರಸಿಂಹ ಮಾಣಿಯವರ ತಾಯಿಗೆ ಧೈರ್ಯ ತುಂಬಿ, ನಾನು ನಮ್ಮಧರ್ಮವನ್ನು ಪ್ರೀತಿಸುವವನು, ಇನ್ನೊಂದು ಧರ್ಮವನ್ನು ಗೌರವಿಸುವವನು. ನಮ್ಮದು ಜಾತ್ಯಾತೀತ ದೇಶವಾಗಿದ್ದು, ಆ ಕಾರಣಕ್ಕೋಸ್ಕರ ನಮ್ಮಧರ್ಮವನ್ನು ಪ್ರೀತಿಸಿ ಇನ್ನೊಂದು ಧರ್ಮವನ್ನು ಗೌರವಿಸುವ ವ್ಯಕ್ತಿತ್ವ. ಹಾಗಿರುವಾಗ ವಿನಾಕಾರಣ ನರಸಿಂಹ ಅವರ ತಂಗಿಯ ವಿವಾಹಕ್ಕೆ ಕೆಲವೇ ದಿನ ಬಾಕಿ ಉಳಿದಿರುವಾಗ ಈ ನಡೆ ಖಂಡನೀಯ. ಮನೆಯ ಜವಬ್ದಾರಿಯನ್ನು ಹೊತ್ತ ಕಾರ್ಯಕರ್ತನಿಗೆ ಕಿರುಕುಳ ನೀಡಿರುವುದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿ ನಮ್ಮಎಸ್ಪಿ ಅವರ ಮೇಲೆ ಅಪಾರ ಗೌರವವಿದ್ದು ಅವರು ಬಂದ ಮೇಲೆ ಜಿಲ್ಲೆ ಸ್ವಲ್ಪ ಮಟ್ಟಿಗೆ ಶಾಂತವಾಗಿದ್ದು, ಅವರು ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವ ಧೋರಣೆ ತೋರಬಾರದು ಎಂದು ಮನವರಿಕೆ ಮಾಡುವ ಮಾತುಗಳನ್ನಾಡಿದರು.
ಇದೇ ಸಂದರ್ಭದಲ್ಲಿ ನರಸಿಂಹ ಮಾಣಿ ಅವರ ತಾಯಿ ಜೊತೆ ಕೆಲವು ಸಮಯ ಕಳೆದ ಮುಖಂಡರು ತಾಯಿಯ ನೋವಿಗೆ ಭಾವುಕರಾದರು. ತಪ್ಪು ಮಾಡದ ಮಗನ ವಿರುದ್ಧ ಯಾಕೆ ಇಂತಹ ಕ್ರಮ? ಹಿಂದೂಗಳ ಪರ ಹೋರಾಡುವವರ ಮೇಲೆ ಕಾಂಗ್ರೆಸ್ ಸರ್ಕಾರಕ್ಕೆ ದ್ವೇಷ ಯಾಕೆ ಎಂದು ತಾಯಿ ನೋವು ತೋಡಿಕೊಂಡರು.
ಒಟ್ಟಿನಲ್ಲಿ ನರಸಿಂಹ ಮಾಣಿ ಅವರ ಗಡಿಪಾರು ಹಿಂದೂ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದು, ಮುಂದಿನ ದಿನಗಳಲ್ಲಿ ಹಿಂದೂ ಸಮಾಜದಿಂದ ದೊಡ್ಡ ಮಟ್ಟದ ಹೋರಾಟ ನಡೆಯಲಿದೆ ಎಂದು ಮುಖಂಡರು ತಿಳಿಸಿದ್ದಾರೆ.








