Saturday, November 21, 2026
spot_imgspot_img
spot_imgspot_img

ಕುಟುಂಬಸ್ಥರಿಂದಲೇ ಅಪಹರಣ ಆರೋಪ: ಕೇರಳದಲ್ಲಿ ವಿದ್ಯಾರ್ಥಿನಿ ಪತ್ತೆ, ಇಬ್ಬರು ವಶಕ್ಕೆ

- Advertisement -
- Advertisement -

ಮಂಗಳೂರು: ದೇರಳಕಟ್ಟೆಯ ಖಾಸಗಿ ವೈದ್ಯಕೀಯ ಕಾಲೇಜಿನ ಆವರಣದಿಂದ ವಿದ್ಯಾರ್ಥಿನಿಯೊಬ್ಬಳನ್ನು ಕುಟುಂಬಸ್ಥರು ಬಲವಂತವಾಗಿ ವಾಹನದಲ್ಲಿ ಕರೆದೊಯ್ದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಕೇರಳದಲ್ಲಿ ವಿದ್ಯಾರ್ಥಿನಿಯನ್ನು ಪತ್ತೆಹಚ್ಚಿ ರಕ್ಷಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.ಗುರುವಾರ ಸಂಜೆ ಕಾಲೇಜಿನ ಆವರಣದಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿದ್ಯಾರ್ಥಿನಿ ಅನ್ಯಧರ್ಮದ ಯುವಕನನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಕುಟುಂಬಸ್ಥರು ಆಕೆಯನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ವಿಡಿಯೋ ಗಮನಿಸಿದ ಪೊಲೀಸ್ ಆಯುಕ್ತರು ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಿದ್ದರು.ಪೊಲೀಸರು ತನಿಖೆ ಕೈಗೊಂಡು ಕೇರಳದಲ್ಲಿರುವ ಸಂಬಂಧಿಕರ ಮನೆಯಿಂದ ವಿದ್ಯಾರ್ಥಿನಿಯನ್ನು ರಕ್ಷಿಸಿದ್ದಾರೆ. ಆಕೆಯ ಹೇಳಿಕೆ ದಾಖಲಿಸಿಕೊಂಡು ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಕುಟುಂಬದೊಂದಿಗೆ ತೆರಳಲು ವಿದ್ಯಾರ್ಥಿನಿ ನಿರಾಕರಿಸಿದ್ದು, ಆಕೆ ಸೂಚಿಸಿದ ಸ್ಥಳಕ್ಕೆ ಪೊಲೀಸ್ ರಕ್ಷಣೆಯಲ್ಲಿ ಕಳುಹಿಸಿಕೊಡಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಕಾನೂನು ಪ್ರಕ್ರಿಯೆಯಂತೆ ನೋಟಿಸ್ ನೀಡಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಇನ್ನೊಂದೆಡೆ, ಘಟನೆ ಕುರಿತು ಸ್ಪಷ್ಟನೆ ನೀಡಿರುವ ಕಣಚೂರು ವೈದ್ಯಕೀಯ ಕಾಲೇಜಿನ ಡೀನ್ ಡಾ. ಶಹನವಾಝ್ ಮಾಣಿಪ್ಪಾಡಿ, ಇದು ಅಪಹರಣ ಪ್ರಕರಣವಲ್ಲ. ವಿದ್ಯಾರ್ಥಿನಿಯ ಪೋಷಕರೇ ಕಾಲೇಜಿಗೆ ಬಂದು ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ.ವಿದ್ಯಾರ್ಥಿನಿ ಕೆಲವು ದಿನಗಳಿಂದ ತರಗತಿಗಳಿಗೆ ಸರಿಯಾಗಿ ಹಾಜರಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೋಷಕರು ಕಾಲೇಜಿಗೆ ಬಂದು ವಿಚಾರಿಸಿದ್ದರು. ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿ ವಿದ್ಯಾರ್ಥಿನಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪೋಷಕರ ವಿರುದ್ಧ ದೂರು ನೀಡಿದ್ದಳು. ಕಾಲೇಜು ಹಾಸ್ಟೆಲ್‌ನಲ್ಲಿ ಆಕೆ ಇಲ್ಲದಿರುವುದನ್ನು ಗಮನಿಸಿ ನ.18ರಂದು ಉಳ್ಳಾಲ ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು ಎಂದು ಡೀನ್ ತಿಳಿಸಿದ್ದಾರೆ.ಬಳಿಕ ಪೊಲೀಸರು ವಿದ್ಯಾರ್ಥಿನಿ, ಪೋಷಕರು ಹಾಗೂ ಕಾಲೇಜಿನವರೊಂದಿಗೆ ಮಾತುಕತೆ ನಡೆಸಿದ್ದರು. ಮರುದಿನ ಪೋಷಕರು ಮತ್ತು ಸಂಬಂಧಿಕರು ಕಾಲೇಜಿಗೆ ಬಂದು ಆಕೆಯನ್ನು ಕರೆದೊಯ್ಯಲು ಮುಂದಾದಾಗ ವಿದ್ಯಾರ್ಥಿನಿ ಅವರೊಂದಿಗೆ ಹೋಗಲು ನಿರಾಕರಿಸಿದ್ದಳು. ಈ ವೇಳೆ ಕುಟುಂಬಸ್ಥರು ಆಕೆಯನ್ನು ವಾಹನದಲ್ಲಿ ಕರೆದೊಯ್ದಿದ್ದಾರೆ.

ಪೋಷಕರೇ ಬಂದಿದ್ದರಿಂದ ಯಾರೂ ಮಧ್ಯಪ್ರವೇಶಿಸಿರಲಿಲ್ಲ ಎಂದು ಡೀನ್ ಸ್ಪಷ್ಟಪಡಿಸಿದ್ದಾರೆ.ಘಟನೆಯ ವಿಡಿಯೋವನ್ನು ಅಪಹರಣವೆಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದ್ದು, ಇದರಿಂದ ಕಾಲೇಜಿನ ಘನತೆಗೆ ಧಕ್ಕೆಯಾಗಿದೆ. ವಿದ್ಯಾರ್ಥಿನಿಯ ಸುರಕ್ಷತೆಯಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸಿಲ್ಲ. ಪೋಷಕರು ಕರೆದುಕೊಂಡು ಹೋದ ವಿಚಾರವನ್ನು ತಕ್ಷಣವೇ ಪೊಲೀಸರಿಗೂ ತಿಳಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

- Advertisement -

Related news

error: Content is protected !!