
ಪುತ್ತೂರು: ಕಾಣಿಯೂರು ಸಮೀಪದ ಮುರುಳ್ಯದಲ್ಲಿ ಶ್ರೀ ರಕೇಶ್ವರಿ ದೇವಿಯ ಸಾನ್ನಿಧ್ಯ ನಿರ್ಮಾಣಕ್ಕೆ ಮೀಸಲಿರಿಸಿದ್ದ ಕುಮ್ಮಿ ಜಾಗವನ್ನು ದಫನ ಭೂಮಿಗಾಗಿ ವಕ್ಸ್ ಬೋರ್ಡ್ಗೆ ಕಾದಿರಿಸಿ ಕಂದಾಯ ಇಲಾಖೆ ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಈ ಜಾಗವನ್ನು ವಕ್ಸ್ ಬೋರ್ಡ್ಗೆ ಕಾದಿರಿಸಿದ್ದ ಕಂದಾಯ ಇಲಾಖೆಯ ಆದೇಶ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇದನ್ನು ವಿರೋಧಿಸಿ ಹಿಂದೂ ಜಾಗರಣಾ ವೇದಿಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯೂ ನಡೆದಿತ್ತು.
ಈ ನಡುವೆ, ಮುರುಳ್ಯ ಹುದೇರಿಯ ಕಿಶನ್ ಅವರ ಪತ್ನಿ ಚೇತನಾ ಕೆ.ಸಿ. ಅವರು ತಮ್ಮ ಸ್ವಾಧೀನದಲ್ಲಿರುವ ಕುಮ್ಮಿ ಭೂಮಿಯನ್ನು ದಫನ ಭೂಮಿಗಾಗಿ ಕಾದಿರಿಸಿ ಕಂದಾಯ ಇಲಾಖೆ ಏಕಾಏಕಿ ಆದೇಶ ಹೊರಡಿಸಿದೆ ಎಂದು ಆರೋಪಿಸಿ ಕರ್ನಾಟಕ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದರು. ಅರ್ಜಿಯಲ್ಲಿ ಜಿಲ್ಲಾಧಿಕಾರಿ ಹಾಗೂ ಸುಳ್ಯ ತಹಶೀಲ್ದಾರ್ ಅವರನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿತ್ತು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಏಕಸದಸ್ಯ ಪೀಠವು ಕಂದಾಯ ಇಲಾಖೆಯ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ. ಅರ್ಜಿದಾರರ ಪರ ಹಿರಿಯ ವಕೀಲ ಡಾ. ಅರುಣ್ ಶ್ಯಾಂ ವಾದ ಮಂಡಿಸಿದ್ದು, ವಕೀಲ ಸುಯೋಗ್ ಹೇರಳೆ ವಕಾಲತ್ತು ವಹಿಸಿದ್ದರು.
ಹಿಂದೂ ಜಾಗರಣಾ ವೇದಿಕೆಯ ಸಂಯೋಜಕ ಮೋಹನದಾಸ್ ಕಾಣಿಯೂರು, ಸಹಸಂಯೋಜಕ ದಿನೇಶ್ ಪಂಜಿಗ ಸೇರಿದಂತೆ ಹಲವರು ಈ ವಿಚಾರವಾಗಿ ನಿರಂತರ ಹೋರಾಟ ನಡೆಸಿದ್ದರು. ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆಯನ್ನು ಹೋರಾಟಕ್ಕೆ ಸಂದ ಜಯ ಎಂದು ಹಿಂದೂ ಜಾಗರಣಾ ವೇದಿಕೆ ಸ್ವಾಗತಿಸಿ ಸಂಭ್ರಮ ವ್ಯಕ್ತಪಡಿಸಿದೆ.








