
ಹೊಸದಿಲ್ಲಿ: ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯ ನೀಡಿದ ನಿರ್ದೇಶನವನ್ನು ಪಾಲಿಸದ ಪೊಲೀಸ್ ಅಧಿಕಾರಿಗೆ ಶಿಕ್ಷೆ ವಿಧಿಸಿದ ಬಿಹಾರದ ನ್ಯಾಯಾಧೀಶರ ಕ್ರಮಕ್ಕೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ನ್ಯಾಯಾಂಗ ಅಧಿಕಾರ ಚಲಾಯಿಸುವಾಗ ‘ಬಾಹುಬಲಿಯಂತೆ ವರ್ತಿಸಬೇಡಿ’ ಎಂದು ನ್ಯಾಯಾಧೀಶರಿಗೆ ಎಚ್ಚರಿಕೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯ್ಯಲ್ಯ ಬಾಗ್ನಿ ಮತ್ತು ವಿ. ಮೊಹನಾ ಅವರನ್ನೊಳಗೊಂಡ ಪೀಠವು ರೋಹ್ತಾಸ್ ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅನಿಲ್ ಕುಮಾರ್ ಅವರ ಕ್ರಮವನ್ನು ಟೀಕಿಸಿದೆ. ಎಫ್ಐಆರ್ ದಾಖಲಿಸುವಂತೆ ನೀಡಿದ್ದ ನಿರ್ದೇಶನವನ್ನು ಪಾಲಿಸದ ಪೊಲೀಸ್ ಅಧಿಕಾರಿಗೆ ಅದೇ ದಿನ ಶಿಕ್ಷೆ ವಿಧಿಸಿದ್ದಲ್ಲದೆ, ಅದನ್ನು ನ್ಯಾಯಾಲಯದ ಮುಂದೆಯೇ ಎಸಗಿದ ಅಪರಾಧವೆಂದು ಪರಿಗಣಿಸಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.
ತಮ್ಮ ಆದೇಶವನ್ನು ಪಾಟ್ನಾ ಹೈಕೋರ್ಟ್ ತಡೆಹಿಡಿದಿರುವುದನ್ನು ಪ್ರಶ್ನಿಸಿ ನ್ಯಾಯಾಧೀಶರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ವೇಳೆ ನ್ಯಾಯಾಂಗ ನಿಂದನೆಗೆ ಸಂಬಂಧಿಸಿದ ಕಾನೂನಿನ ಕುರಿತು ನ್ಯಾಯಾಧೀಶರ ತಿಳುವಳಿಕೆಯನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್, ಅವರನ್ನು ತರಬೇತಿಗಾಗಿ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಗೆ ಕಳುಹಿಸುವಂತೆಯೂ ಸೂಚಿಸಿದೆ.ವಿಚಾರಣೆ ವೇಳೆ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, “ನ್ಯಾಯಾಂಗ ಅಧಿಕಾರ ಚಲಾಯಿಸುವಾಗ ನಿಮ್ಮ ಕಕ್ಷಿದಾರರು ಬಾಹುಬಲಿಯಂತೆ ವರ್ತಿಸುವುದನ್ನು ನಿಲ್ಲಿಸುವಂತೆ ಹೇಳಿ” ಎಂದು ಎಚ್ಚರಿಸಿದರು
.ಬಿಎನ್ಎಸ್ಎಸ್ ಸೆಕ್ಷನ್ 384 ಮತ್ತು ಸಿಆರ್ಪಿಸಿ ಸೆಕ್ಷನ್ 345ರ ವ್ಯಾಪ್ತಿ ಹಾಗೂ ಅನ್ವಯವನ್ನು ಮೊದಲು ಅರ್ಥಮಾಡಿಕೊಳ್ಳಬೇಕು ಎಂದು ಪೀಠವು ತಿಳಿಸಿತು. ನ್ಯಾಯಾಲಯದ ಮುಂದೆ ಯಾರಿಗಾದರೂ ಕಪಾಳಮೋಕ್ಷ ಮಾಡುವುದು, ನ್ಯಾಯಾಲಯವನ್ನು ನಿಂದಿಸುವುದು ಅಥವಾ ನ್ಯಾಯಾಲಯದ ಸೂಚನೆಯ ಹೊರತಾಗಿಯೂ ಕೊಠಡಿಯಿಂದ ಹೊರಹೋಗಲು ನಿರಾಕರಿಸುವುದು ನ್ಯಾಯಾಲಯದ ಮುಂದೆಯೇ ಎಸಗಿದ ಅಪರಾಧವಾಗುತ್ತದೆ. ಆದರೆ, ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದಾಗ ಅದನ್ನು ಪಾಲಿಸದಿರುವುದನ್ನು ನ್ಯಾಯಾಲಯದ ಮುಂದೆಯೇ ಎಸಗಿದ ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.








