


“ಕ್ಲಿಕ್…” ಒಂದೇ ಒಂದು ಸಣ್ಣ ಶಬ್ದ. ಆದರೆ ಆ ಶಬ್ದದೊಳಗೆ ಒಂದು ಕಾಲಘಟ್ಟವೇ ಸೆರೆಯಾಗಿ ನಿಂತಿರುತ್ತದೆ. ಒಂದು ನಗು, ಒಂದು ಕಣ್ಣೀರು, ಒಂದು ಸುಂದರ ಪ್ರಯಾಣ, ಒಂದು ಬಾಂಧವ್ಯ, ಒಂದು ಹಬ್ಬ, ಒಂದು ಕನಸು ಎಲ್ಲವನ್ನೂ ಒಂದೇ ಕ್ಷಣದಲ್ಲಿ ಶಾಶ್ವತವಾಗಿ ಬಂಧಿಯಾಗಿಸುತ್ತದೆ. ಅದೇ ಛಾಯಾಚಿತ್ರದ ಮಾಯೆ.
ಪ್ರತೀ ವರ್ಷ ಆಗಸ್ಟ್ 19ರಂದು ‘ವಿಶ್ವ ಛಾಯಾಗ್ರಹಣ ದಿನ’ವನ್ನು ಆಚರಿಸಲಾಗುತ್ತದೆ. ಕ್ಯಾಮೆರಾದ ಹಿಂದೆ ನಿಂತು ಜಗತ್ತನ್ನು ನೋಡುವ ಕಣ್ಣುಗಳಿಗೆ, ಕ್ಷಣಗಳನ್ನು ಕಥೆಗಳಾಗಿ ಪರಿವರ್ತಿಸುವ ಸೃಜನಶೀಲತೆಗೆ ಈ ದಿನದ ಗೌರವ ಸಲ್ಲುತ್ತದೆ.
ಮನುಷ್ಯನ ನೆನಪುಗಳಿಗೆ ಒಂದು ವಿಚಿತ್ರ ಸ್ವಭಾವವಿದೆ. ಕೆಲವು ಘಟನೆಗಳು ವರ್ಷಗಳಾದರೂ ಮಸುಕಾಗುವುದಿಲ್ಲ, ಮಾಸುವುದೂ ಇಲ್ಲ. ಆದರೆ ಕೆಲವು ಕ್ಷಣಗಳು ಮಾತ್ರ ನಿಧಾನವಾಗಿ ನಮ್ಮ ನೆನಪಿನಿಂದ ಜಾರಿಹೋಗುತ್ತವೆ. ಅಂತಹ ಸಂದರ್ಭಗಳಲ್ಲಿ ಒಂದು ಛಾಯಾಚಿತ್ರ “ಇದು ಅಂದಿನ ಆ ದಿನ.. ನೀನು ಇಲ್ಲಿದ್ದೆ.. ನಾನು ಇಲ್ಲಿದ್ದೆ.. ನೋಡು..” ಎಂದು ನೆನಪಿಸಿಕೊಳ್ಳುವಂತೆ ಮಾಡುತ್ತದೆ. ಹಾಗಾಗಿ ಛಾಯಾಚಿತ್ರವೆಂದರೆ ಕೇವಲ ಕಾಗದದ ಮೇಲಿನ ಚಿತ್ರವಷ್ಟೇ ಅಲ್ಲ; ಅದು ನಮ್ಮ ಬಾಳ ಪಯಣದ ನೆನಪಿನ ಬಾಗಿಲಿನ ಕೀಲಿಕೈ.
ಒಂದು ಕಾಲದಲ್ಲಿ ಕ್ಯಾಮೆರಾ ಎನ್ನುವುದು ಕೇವಲ ಶ್ರೀಮಂತರ ಮನೆಗಳಲ್ಲಿನ ಅಪರೂಪದ ಸಾಧನವಾಗಿತ್ತು. ಅದರಲ್ಲೂ ಒಂದು ವಿಶೇಷ ಸಂದರ್ಭದಲ್ಲಿ ಕುಟುಂಬವೊಂದು ಕ್ಯಾಮೆರಾದ ಮುಂದೆ ಕುಳಿತು ಎಲ್ಲರೂ ಒಂದೇ ಕಡೆ ನೋಡಿ ಗಂಭೀರ ಮುಖದಲ್ಲಿ ಛಾಯಾಚಿತ್ರ ತೆಗೆಸಿಕೊಳ್ಳುತ್ತಿದ್ದ ಕಾಲವಿತ್ತು. ಇಂದು ಆ ದೃಶ್ಯ ಬದಲಾಗಿದೆ. ಕೈಯಲ್ಲಿರುವ ಮೊಬೈಲ್‌ನಲ್ಲೇ ಕ್ಯಾಮೆರಾ. ಕ್ಷಣಕ್ಕೊಂದು ಚಿತ್ರ. ದಿನಕ್ಕೆ ನೂರು ನೆನಪುಗಳು!
ಇಂದು ತಂತ್ರಜ್ಞಾನ ಛಾಯಾಗ್ರಹಣವನ್ನು ಸುಲಭಗೊಳಿಸಿದೆ. ಆದರೆ ಒಂದು ಒಳ್ಳೆಯ ಮನಸೆಳೆಯುವ ಛಾಯಾಚಿತ್ರಕ್ಕೆ ದುಬಾರಿ ಕ್ಯಾಮೆರಾಕ್ಕಿಂತ ಮುಖ್ಯವಾದುದು ನೋಡುವ ಕಣ್ಣು. ಎಲ್ಲರೂ ಸೂರ್ಯೋದಯವನ್ನು ನೋಡುತ್ತಾರೆ; ಆದರೆ ಅದರ ಬಣ್ಣಗಳ ಕಥೆಯನ್ನು ಸೆರೆಹಿಡಿಯುವವನು ಛಾಯಾಗ್ರಾಹಕ. ಎಲ್ಲರೂ ಮಳೆಯ ಹನಿಯನ್ನು ಕಾಣುತ್ತಾರೆ; ಆದರೆ ಅದರೊಳಗೆ ಪ್ರತಿಬಿಂಬಿಸುವ ಜಗತ್ತನ್ನು ಗುರುತಿಸುವವನು ಛಾಯಾಗ್ರಾಹಕ.
ಒಂದು ಛಾಯಾಚಿತ್ರ ಇತಿಹಾಸವನ್ನು ಕೂಡಾ ದಾಖಲಿಸುತ್ತದೆ. ಸ್ವಾತಂತ್ರ್ಯ ಹೋರಾಟದ ದೃಶ್ಯಗಳು, ಸಾಮಾಜಿಕ ಚಳವಳಿಗಳು, ಮಹತ್ವದ ಘಟನೆಗಳು, ಪ್ರಕೃತಿ ವಿಕೋಪಗಳು ಇವೆಲ್ಲವೂ ಮುಂದಿನ ತಲೆಮಾರುಗಳ ಜೊತೆಗೆ ಮಾತನಾಡುವುದು ಚಿತ್ರಗಳ ಮೂಲಕವೇ. ಕೆಲವೊಮ್ಮೆ ಸಾವಿರ ಪದಗಳು ಹೇಳಲಾಗದ ಸತ್ಯವನ್ನು ಒಂದೇ ಒಂದು ಚಿತ್ರ ಹೇಳಿಬಿಡುತ್ತದೆ. ಅದರಲ್ಲೂ ಪತ್ರಿಕೋದ್ಯಮ ಕ್ಷೇತ್ರದಲ್ಲಂತೂ ಛಾಯಾಚಿತ್ರದ ಶಕ್ತಿ ಅಪಾರವಾದುದು.
ಪ್ರಕೃತಿಯಲ್ಲಿನ ಒಂದು ಅಪರೂಪದ ಜೀವಿ, ಹೂವಿನ ಮೇಲಿನ ಮಂಜ ಹನಿ, ಸಮುದ್ರದ ಅಲೆ, ಬಣ್ಣ ಬಣ್ಣದ ಹಕ್ಕಿಗಳ ಚಿತ್ರಗಳು ಕೇವಲ ಪ್ರಕೃತಿಯ ಸೌಂದರ್ಯವನ್ನು ಮಾತ್ರ ತೋರಿಸುವುದಿಲ್ಲ; ಜೊತೆಗೆ ಅದನ್ನು ಉಳಿಸಬೇಕೆಂಬ ಹೊಣೆಗಾರಿಕೆಯನ್ನೂ ನೆನಪಿಸುತ್ತವೆ.
ಆದರೆ ನೆನಪಿರಲಿ: ಪ್ರತಿಯೊಂದು ಕ್ಲಿಕ್ಕಿಗೂ ಒಂದು ಜವಾಬ್ದಾರಿ ಇದೆ. ಮತ್ತೊಬ್ಬರ ಖಾಸಗಿತನಕ್ಕೆ ಗೌರವ, ಅನುಮತಿಯ ಮಹತ್ವ ಮತ್ತು ಚಿತ್ರಗಳ ದುರುಪಯೋಗವಾಗದಂತೆ ಎಚ್ಚರಿಕೆ ಇವುಗಳೂ ನಮ್ಮ ಛಾಯಾಗ್ರಹಣ ಸಂಸ್ಕೃತಿಯ ಭಾಗವಾಗಬೇಕು. ಛಾಯಾಚಿತ್ರವನ್ನು ತೆಗೆಯುವ ಮೊದಲು “ನಿಮ್ಮ ಫೋಟೋ ತೆಗೆಯಬಹುದೇ?” ಎಂದು ಕೇಳುವ ಮನಸ್ಸು ಕೂಡಾ ಕ್ಯಾಮೆರಾದಷ್ಟೇ ಮುಖ್ಯ.
ಇಂದು ಛಾಯಾಗ್ರಹಣ ಎನ್ನುವುದು ಹವ್ಯಾಸದಿಂದ ಉದ್ಯೋಗದವರೆಗೆ ವಿಸ್ತರಿಸಿದೆ. ಪತ್ರಿಕಾ ಛಾಯಾಗ್ರಹಣ, ವನ್ಯಜೀವಿ ಛಾಯಾಗ್ರಹಣ, ಕ್ರೀಡೆ, ಪ್ರವಾಸ, ಜಾಹೀರಾತು, ಫ್ಯಾಷನ್, ಮದುವೆ ಹಾಗೂ ವೈಜ್ಞಾನಿಕ ಕ್ಷೇತ್ರಗಳಲ್ಲಿಯೂ ಛಾಯಾಗ್ರಹಣದ ಅವಕಾಶಗಳು ಹೆಚ್ಚಿವೆ. ಹೊಸ ಹೊಸ ತಂತ್ರಜ್ಞಾನಗಳು ಬಂದರೂ ಛಾಯಾಗ್ರಾಹಕನ ಸೃಜನಶೀಲ ದೃಷ್ಟಿಗೆ ಪರ್ಯಾಯವಿನ್ನೂ ಬಂದಿಲ್ಲ.
ಕಾಲ ಕಣ್ಣು ಮಿಟುಕಿಸುವುದರೊಳಗೆ ಕೈಗೆ ಸಿಗದೇ ಓಡುತ್ತದೆ. ಮುಖಗಳಿಗೆ ವಯಸ್ಸಾಗುತ್ತದೆ. ಸ್ಥಳಗಳು ಬದಲಾಗುತ್ತವೆ. ಆದರೆ ಒಂದು ಚಿತ್ರ ಮಾತ್ರ ಆ ಕ್ಷಣವನ್ನು ಸೆರೆಯಾಗಿಸಿ ಅಲ್ಲಿಯೇ ನಿಂತಿರುತ್ತದೆ. ಅದಕ್ಕೇ ಛಾಯಾಗ್ರಹಣವೆಂದರೆ ಕೇವಲ ಚಿತ್ರ ತೆಗೆಯುವ ಕಲೆ ಮಾತ್ರವಲ್ಲ; ಅದು ಕಳೆದುಹೋಗುವ ಕ್ಷಣಗಳಿಗೆ ಶಾಶ್ವತ ನೆಲೆಯನ್ನು ಒದಗಿಸಿಕೊಡುವ ಕಲೆ.
ಇಂದು ವಿಶ್ವ ಛಾಯಾಗ್ರಹಣ ದಿನದಂದು ಕ್ಯಾಮೆರಾಗೆ ಮಾತ್ರವಲ್ಲ, ಕ್ಯಾಮೆರಾದ ಹಿಂದೆ ನಿಂತು ಜಗತ್ತನ್ನು ವಿಭಿನ್ನವಾಗಿ ನೋಡುವ ಆ ಕಣ್ಣುಗಳಿಗೂ ಒಂದು ಸಲಾಂ.
✍ಡಾ. ಮೈತ್ರಿ ಭಟ್, ವಿಟ್ಲ








