- Advertisement -
- Advertisement -



ಅಡ್ಯನಡ್ಕ: ಕಲ್ಲಡ್ಕ-ಕಾಂಞಂಗಾಡ್ ರಾಷ್ಟ್ರೀಯ ಹೆದ್ದಾರಿಯ ಅಡ್ಯನಡ್ಕ ಸಮೀಪದ ಕುದ್ದುಪದವು ಎಂಬಲ್ಲಿ ಕಂಟೈನರ್ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾದ ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಅದೃಷ್ಟವಶಾತ್ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನಿಂದ ಕೇರಳದ ಚೆರ್ಕಳ ಕಡೆಗೆ ಸೈಕಲ್ಗಳನ್ನು ಸಾಗಿಸುತ್ತಿದ್ದ KA 52 C 6569 ನೋಂದಣಿಯ ಕಂಟೈನರ್ ಲಾರಿ, ಕಲ್ಲಡ್ಕದಿಂದ ವಿಟ್ಲ ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ ಕರ್ನಾಟಕ-ಕೇರಳ ಗಡಿ ಭಾಗದ ಕುದ್ದುಪದವು ಬಳಿ ಈ ಅವಘಡ ಸಂಭವಿಸಿದೆ. ವಾಹನದಲ್ಲಿ ಚಾಲಕ ಪರುಶುರಾಮ ಮಾತ್ರ ಇದ್ದರು ಎಂದು ತಿಳಿದುಬಂದಿದೆ.
ಮಾರ್ಗದ ಬದಿಯಲ್ಲಿ ಪೈಪ್ಲೈನ್ ಕಾಮಗಾರಿಗಾಗಿ ತೆಗೆದಿದ್ದ ಗುಂಡಿಗೆ ಲಾರಿಯ ಚಕ್ರ ಹೂತುಹೋದ ಪರಿಣಾಮ ನಿಯಂತ್ರಣ ಕಳೆದುಕೊಂಡು ಲಾರಿ ಉರುಳಿ ಬಿದ್ದಿದೆ ಎಂದು ಚಾಲಕ ತಿಳಿಸಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಇತರ ವಾಹನಗಳ ಸಂಚಾರ ವಿರಳವಾಗಿದ್ದರಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದೆ.
- Advertisement -








