


ಉಡುಪಿ: ಬೈಂದೂರು ತಾಲೂಕಿನ ಶಿರೂರಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಉಪ್ಪುಂದ ಜನತಾ ಕಾಲೊನಿಯ ಅಭಿಷೇಕ ಖಾರ್ವಿ(23) ಹಾಗೂ ಪ್ರವೀಣ ಖಾರ್ವಿ(23) ಎಂದು ಗುರುತಿಸಲಾಗಿದೆ.
ಉಪ್ಪುಂದದ ಪ್ರಸಿದ್ಧ ಕೊಡಿ ಹಬ್ಬದ ಹಿನ್ನೆಲೆಯಲ್ಲಿ ಊರಿಗೆ ಆಗಮಿಸಿದ್ದ ಇಬ್ಬರು ಯುವಕರು ಅಪಘಾತದಲ್ಲಿ ಬಲಿಯಾಗಿರುವುದು ಕುಟುಂಬಸ್ಥರಲ್ಲಿ ಶೋಕದ ಛಾಯೆ ಮೂಡಿಸಿದೆ. ಪ್ರವೀಣ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರೆ, ಅಭಿಷೇಕ ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಇಬ್ಬರೂ ಬಡ ಕುಟುಂಬದವರಾಗಿದ್ದು, ಯುವಕರ ಅಕಾಲಿಕ ಸಾವು ಕುಟುಂಬಕ್ಕೆ ಆಧಾರವನ್ನೇ ಕಳೆದುಕೊಂಡಂತಾಗಿದೆ.
ಇಬ್ಬರೂ ಉಪ್ಪುಂದದಿಂದ ಶಿರೂರು ಟೋಲ್‌ಗೇಟ್ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಶಿರೂರಿನ ಇಂಡಿಯನ್ ಪೆಟ್ರೋಲ್ ಬಂಕ್ ಸಮೀಪ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಬೈಂದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.








