

ಗದಗ: ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಗಾಂಜಾ ಉತ್ಪಾದನೆ. ಸರ್ಕಾರಿ ಕೆರೆಯ ಭಾಗದಲ್ಲಿ ಗಾಂಜಾ ಬೆಳೆದಿರುವ ಘಟನೆ ಜಿಲ್ಲೆ ಶಿರಹಟ್ಟಿ ತಾಲೂಕಿನ ಶ್ರೀಮಂತಗಡ ಬಳಿ ನಡೆದಿದೆ.
ಅರಣ್ಯದಲ್ಲಿರುವ ಕೆರೆಯ ಒಳಭಾಗದ ಮುಳ್ಳಿನ ಪೊದೆಯಲ್ಲಿ ಗಾಂಜಾ ಬೆಳೆ ಪತ್ತೆಯಾಗಿವೆ. ಸುಮಾರು 25 ಕ್ಕೂ ಹೆಚ್ಚು ಗಾಂಜಾ ಸಸಿಗಳು ಪತ್ತೆಯಾಗಿವೆ. ಅವುಗಳಿಗೆ ನೀರಿನ ಸಿಂಟೆಕ್ಸ್, ಪೈಪ್, ಪಂಪ್ ಮೂಲಕ ಗಾಂಜಾ ಬೆಳೆಗೆ ನೀರುಣಿಸುವ ಕಾರ್ಯ ನಡೆದಿದೆ. ನಿರ್ಜನ ಪ್ರದೇಶದ ಸರ್ಕಾರಿ ಕೆರೆಯಲ್ಲಿ ಗಾಂಜಾ ಬೆಳೆ ಕಂಡು ಜನ ದಂಗಾಗಿದ್ದಾರೆ.
ಯಾರು ಈ ಗಾಂಜಾ ಬೆಳೆಗಾರರು ಎಂಬುದು ಗೊತ್ತಾಗಿಲ್ಲ. ಸ್ಥಳಕ್ಕೆ ಶಿರಹಟ್ಟಿ ಪೊಲೀಸ್ ಹಾಗೂ ತಹಶಿಲ್ದಾರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಗಾಂಜಾ ಬೆಳೆಗೆ ಬಳಸಿದ ಸಿಂಟೆಕ್ಸ್, ಪೈಪ್, ಮೋಟಾರ್ ಪಂಪ್ ಇತರೆ ಸಲಕರಣೆಗಳು ಹಾಗೂ ಗಾಂಜಾ ಬೆಳೆಯನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಗಾಂಜಾ ಬೆಳೆದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಕುರಿತು ಗದಗ ಜಿಲ್ಲೆ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.








