


ಹೊಸದಿಲ್ಲಿ: ಆಹಾರ ಉತ್ಪನ್ನಗಳಲ್ಲಿ ಫ್ರಂಟ್ ಆಫ್ ಪ್ಯಾಕೇಜ್ ನ್ಯೂಟ್ರೇಷನ್ ಲೇಬಲಿಂಗ್ ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಕೇಂದ್ರ ಸರಕಾರ ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಇದಲ್ಲದೆ ಹೆಚ್ಚಿನ ಪ್ರಮಾಣದ ಕೊಬ್ಬು ಸಕ್ಕರೆ ಮತ್ತು ಉಪ್ಪು ಹೊಂದಿರುವ ಉತ್ಪನ್ನಗಳಿಗೆ ಪ್ರತ್ಯೇಕ ಚಿತ್ರಸಹಿತ ಎಚ್ಚರಿಕೆಯ ಚಿಹ್ನೆಗಳನ್ನು ಬಳಸುವುದನ್ನೂ ಖಚಿತಪಡಿಸುವಂತೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ನ್ಯಾಯಪೀಠವು, ಪ್ರತಿಯೊಂದು ಎಚ್ಚರಿಕೆಯ ಲೇಬಲ್‌ನಲ್ಲಿ ಸಂಬಂಧಿತ ಪೌಷ್ಟಿಕಾಂಶವನ್ನು ಸೂಚಿಸುವ ಪ್ರಮಾಣಿತ ಚಿತ್ರಾತ್ಮಕ ಚಿಹ್ನೆಯ ಜೊತೆಗೆ, ಆಯಾ ಉತ್ಪನ್ನಕ್ಕೆ ಅನುಗುಣವಾಗಿ “HIGH FAT”(ಹೆಚ್ಚಿನ ಕೊಬ್ಬು), “HIGH SUGAR” (ಹೆಚ್ಚಿನ ಸಕ್ಕರೆ) ಅಥವಾ “HIGH SALT”(ಹೆಚ್ಚಿನ ಉಪ್ಪು) ಎಂಬ ಪದಗಳನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ನಿರ್ದೇಶಿಸಿದೆ.
ಪೌಷ್ಟಿಕಾಂಶಗಳ ಮಿತಿಯನ್ನು ನಿರ್ಧರಿಸುವಾಗ, ಸೇರಿಸಲಾದ ಸಕ್ಕರೆ ಮತ್ತು ಕೊಬ್ಬಿನ ಬದಲಿಗೆ ಒಟ್ಟು ಸಕ್ಕರೆ ಹಾಗೂ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣವನ್ನು ಖಚಿತಪಡಿಸುವಂತೆ ಸುಪ್ರೀಂ ಕೋರ್ಟ್ ಎಫ್‌ಎಸ್‌ಎಸ್‌ಎಐಗೆ ನಿರ್ದೇಶನ ನೀಡಿದೆ. ಪ್ರತಿಯೊಂದು ಪೌಷ್ಟಿಕಾಂಶದ ಮಿತಿಯನ್ನು ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ಮರುನಿಗದಿಪಡಿಸುವಂತೆ FSSAI ಗೆ ಸೂಚಿಸಲಾಗಿದೆ. ಈ ಮಿತಿಗಳು ಅತಿ ಕಡಿಮೆಯೂ ಆಗಿರಬಾರದು ಅಥವಾ ಅತಿ ಹೆಚ್ಚ ಆಗಿರಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶಿಸಿರುವುದಾಗಿ ತಿಳಿದುಬಂದಿದೆ.








