






ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿಯ ದಯಾರ ಬುಗ್ಯಾಲ್‌ನಲ್ಲಿ ಟ್ರೆಕ್ಕಿಂಗ್ ವೇಳೆ ನಾಪತ್ತೆಯಾಗಿದ್ದ ಎಂಬಿಎ ವಿದ್ಯಾರ್ಥಿನಿಯ ಸುಳಿವು ವಾರವಾದರೂ ಸಿಕ್ಕಿಲ್ಲ.
ನೈನಿತಾಲ್ ನಿವಾಸಿ ಬಬಿತಾ ಪಾಂಡೆ ಉತ್ತರಾಖಂಡದ ಉಧಮ್ ಸಿಂಗ್ ನಗರದ ಹರ್ಮನ್‌ಪಾಲ್ ಸಿಂಗ್ ಮತ್ತು ಉತ್ತರ ಪ್ರದೇಶದ ಶಹಜಹಾನ್‌ಪುರದ ಹರ್ಮನ್‌ಪ್ರೀತ್ ಸಿಂಗ್ ಅವರೊಂದಿಗೆ ಉತ್ತರಕಾಶಿಗೆ ಟ್ರೆಕ್ಕಿಂಗ್‌ಗೆ ತೆರಳಿದ್ದರು. ಈ ವೇಳೆ ಅವರು ನಾಪತ್ತೆಯಾಗಿದ್ದರು. ಈ ಸಂಬಂಧ ಕುಟುಂಬಸ್ಥರು ದೂರು ನೀಡಿದ್ದು, ದೂರಿನ ಅನ್ವಯ ಯುವತಿಯ ಇಬ್ಬರು ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮೂವರು ಮೇ 25 ರಂದು ಡೆಹ್ರಾಡೂನ್‌ಗೆ ತೆರಳಿದ್ದರು. ನಂತರ ಹರ್ಸಿಲ್, ಗಂಗೋತ್ರಿ ಮತ್ತು ಹತ್ತಿರದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದರು. ನಂತರ ಮೂವರು ಮೇ 28 ರಂದು ರೈಥಾಲ್ ಗ್ರಾಮಕ್ಕೆ ಹೋಗಿ ಅಲ್ಲಿಯೇ ಇದ್ದರು. ಅವರು ಕೊನೆಯದಾಗಿ ಓಡಾಡಿದ ದೃಶ್ಯ ರೈಥಾಲ್‌ನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ ಎಂದು ಉತ್ತರಕಾಶಿ ಪೊಲೀಸ್ ವರಿಷ್ಠಾಧಿಕಾರಿ ಕಮಲೇಶ್ ಉಪಾಧ್ಯಾಯ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.
ಒಂದು ದಿನದ ನಂತರ ರೈಥಾಲ್‌ನಿಂದ ಉತ್ತರಾಖಂಡದ ಜನಪ್ರಿಯ ಟ್ರೆಕ್ಕಿಂಗ್ ಪ್ರದೇಶವಾದ ದಯಾರಾ ಬುಗ್ಯಾಲ್‌ಗೆ ನಡಿಗೆ ಪ್ರಾರಂಭಿಸಿದ್ದರು. ರಾತ್ರಿ ಗೋಯಿ ಬೇಸ್ ಕ್ಯಾಂಪ್‌ನಲ್ಲಿ ತಂಗಿದ್ದರು. ಮಧ್ಯರಾತ್ರಿಯ ಸುಮಾರಿಗೆ, ಪಾಂಡೆ ಶಿಬಿರದಿಂದ ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಅವರ ಹುಡುಕಾಟಕ್ಕಾಗಿ ಸೇನೆ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್, ರಾಜ್ಯ ವಿಪತ್ತು ರಕ್ಷಣಾ ಪಡೆ, ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆ, ಪೊಲೀಸರು, ಅರಣ್ಯ ಇಲಾಖೆ ಮತ್ತು ವಿಪತ್ತು ನಿರ್ವಹಣೆಯ ಸಿಬ್ಬಂದಿಯನ್ನು ಒಳಗೊಂಡ 150 ಸದಸ್ಯರ ತಂಡ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ದಟ್ಟವಾದ ಅರಣ್ಯ, ಚಾರಣ ಮಾರ್ಗಗಳು ಮತ್ತು ಗುಹೆಗಳ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸ್ನಿಫರ್ ನಾಯಿಗಳು ಮತ್ತು ಡ್ರೋನ್ ಬಳಸಿ ಹುಡುಕಾಟ ನಡೆಸಲಾಗುತ್ತಿದೆ. ಅಲ್ಲದೇ ಆರು ಸದಸ್ಯರ ಡೈವಿಂಗ್ ತಂಡವು ಗೋಯಿ ಶಿಬಿರದ ಬಳಿಯ ಸರೋವರವನ್ನು ಸಹ ಹುಡುಕುತ್ತಿದೆ. ಪೊಲೀಸರು ಆಕೆಯ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಸಾರ್ವಜನಿಕರಿಂದ ಮಾಹಿತಿ ನೀಡುವಂತೆ ಕೋರಿದ್ದಾರೆ.
ಪಾಂಡೆ ಮತ್ತು ಅವರ ಸ್ನೇಹಿತರನ್ನು ನಕಲಿ ಪರವಾನಗಿ ಬಳಸಿ ಚಾರಣಕ್ಕೆ ಕಳುಹಿಸಲಾಗಿದೆ ಎಂದು ಗೊತ್ತಾದ ನಂತರ, ಟ್ರೆಕ್ಕಿಂಗ್ ಏಜೆನ್ಸಿ ಪ್ರೊ ಮೌಂಟೇನ್‌ನ ನೋಂದಣಿಯನ್ನು ಅಮಾನತುಗೊಳಿಸಲಾಗಿದ್ದು, ಟ್ರೆಕ್ಕಿಂಗ್ ಗೈಡ್‌ಗಳು ಮತ್ತು ಏಜೆನ್ಸಿಯೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳನ್ನು ಸಹ ವಿಚಾರಣೆ ನಡೆಸಲಾಗುತ್ತಿದೆ.
ಪೊಲೀಸರು ವೈಯಕ್ತಿಕ ವಿವಾದ, ಇತರ ಅನುಮಾನಾಸ್ಪದ ಚಟುವಟಿಕೆಯ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.








