
ಹೊಸದಿಲ್ಲಿ: ಒಂಟಿ OBC ತಾಯಂದಿರ ಮಕ್ಕಳಿಗೂ ಮೀಸಲಾತಿ ಸೌಲಭ್ಯ ಪಡೆಯಲು ಜಾತಿ ಪ್ರಮಾಣಪತ್ರ ನೀಡುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ.ಮಗುವಿನ ಜಾತಿ ಸ್ಥಾನಮಾನವನ್ನು ತಂದೆಯ ವಂಶಾವಳಿಯ ಆಧಾರದಲ್ಲಿ ನಿರ್ಧರಿಸುವ ಪ್ರಸ್ತುತ ನಿಯಮವನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ವಿಚ್ಛೇದನ, ಪತಿಯಿಂದ ಪರಿತ್ಯಕ್ತರಾದ ತಾಯಂದಿರು ಹಾಗೂ ಮಗುವಿನ ಪಾಲನೆ ತಾಯಿಗೆ ವಹಿಸಲಾದ ಸಂದರ್ಭಗಳಲ್ಲಿ ಈ ನಿಯಮದ ಅನ್ವಯವನ್ನು ಪರಿಶೀಲಿಸುವಂತೆ ತಿಳಿಸಿದೆ.OBC ಸಮುದಾಯಕ್ಕೆ ಸೇರಿದ ಒಂಟಿ ತಾಯಿ ಹಾಗೂ ನಿವೃತ್ತ ಶಾಲಾ ಶಿಕ್ಷಕಿ ಸಂತೋಷ ಕುಮಾರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಜಾಯಮಾಲ್ಯ ಬಾಗ್ನಿ ಮತ್ತು ವಿ. ಮೋಹನಾ ಅವರ ಪೀಠ ಈ ಸೂಚನೆ ನೀಡಿದೆ.
ಜಾತಿ ಪ್ರಮಾಣಪತ್ರ ವಿತರಣೆ ರಾಜ್ಯ ಸರಕಾರಗಳ ವ್ಯಾಪ್ತಿಗೆ ಬರುವ ವಿಷಯವಾಗಿದ್ದು, ಒಂಟಿ OBC ತಾಯಂದಿರ ಮಕ್ಕಳಿಗೆ ಪ್ರಮಾಣಪತ್ರ ನೀಡುವ ಕುರಿತು ರಾಜ್ಯಗಳು ಸ್ವತಂತ್ರವಾಗಿ ನೀತಿ ರೂಪಿಸಬಹುದು ಎಂದು ಕೇಂದ್ರ ಸರಕಾರ ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿತ್ತು.ಮಗುವನ್ನು ಯಾರು ಬೆಳೆಸುತ್ತಿದ್ದಾರೋ ಆ OBC ಪೋಷಕರ ದಾಖಲೆಗಳ ಆಧಾರದಲ್ಲಿ ಪ್ರಮಾಣಪತ್ರ ನೀಡುವ ಸಾಧ್ಯತೆಯನ್ನೂ ಕೇಂದ್ರ ಉಲ್ಲೇಖಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ರಾಜ್ಯಗಳಿಗೆ ನಿರ್ಧಾರ ಕೈಗೊಳ್ಳಲು ಅನುಕೂಲವಾಗುವಂತೆ ಕೇಂದ್ರ ಸರಕಾರ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಬೇಕಿದೆ ಎಂದು ಹೇಳಿತು.
ಈ ವಿಷಯವು ವ್ಯಾಪಕ ಪರಿಣಾಮಗಳನ್ನು ಹೊಂದಿರುವುದರಿಂದ ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರ ಅಭಿಪ್ರಾಯವನ್ನೂ ಕೋರಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ಮುಂದೂಡಿದೆ.








