ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಅಳವಡಿಸಿದ್ದ ಡಿವೈಡರ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಕಿಶೋರ್ ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳವಾರ ಮಧ್ಯ ರಾತ್ರಿ ನಡೆದಿದೆ.

ಹಳೇನೇರಂಕಿ ಗ್ರಾಮದ ಕಲ್ಲೇರಿ ನಿವಾಸಿ ದಿ.ವೆಂಕಟೇಶ್ ದೇವಾಡಿಗರವರ ಮಗ ಕಿಶೋರ್ ಮಂಗಳೂರಿನ ಖಾಸಗಿ ಡಿಜಿಟಲ್ ಪ್ರಿಂಟರ್ ಶಾಪ್ ನಲ್ಲಿ ಉದ್ಯೋಗಿಯಾಗಿದ್ದು, ಮಂಗಳೂರಿನಿಂದ ಹಳೇನೇರಂಕಿಗೆ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಡಿವೈಡರ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ನೆಲಕ್ಕೆ ಅಪ್ಪಳಿಸಿದ ಕಿಶೋರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ಕಿಶೋರ್ ಕಳೆದ ಡಿಸೆಂಬರ್ ತಿಂಗಳಲ್ಲಿ ಕುಂದಾಪುರ ಮೂಲದ ಹುಡುಗಿಯೊಂದಿಗೆ ವಿವಾಹವಾಗಿದ್ದು, ಸುಖೀ ಸಾಂಸಾರಿಕ ಬದುಕಿನ ಪಥದಲ್ಲಿ ಕಾಲಿರಿಸುತ್ತಿದ್ದಂತೆಯೇ ಬೈಕ್ ಅಪಘಾತದಲ್ಲಿ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.

ಕಿಶೋರ್ ನ ತಂದೆ ವೆಂಕಟೇಶ್ ದೇವಾಡಿಗ ನಿಧನರಾಗಿದ್ದು, ಮನೆಯಲ್ಲಿ ತಾಯಿ ಮತ್ತು ಇಬ್ಬರು ಸಹೋದರಿಯರ ಹೊಣೆಗಾರಿಕೆ ಹೊತ್ತು ಕುಟುಂಬಕ್ಕೆ ಆಧಾರವಾಗಿದ್ದಾತನ ಅಕಾಲಿಕ ನಿಧನದಿಂದಾಗಿ ಅವರ ಕುಟುಂಬ ಅತಂತ್ರವಾಗಿದೆ. ಘಟನೆಯ ಕುರಿತು ಪುತ್ತೂರು ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.










