


ಬೆಳ್ತಂಗಡಿ : ಸೌಜನ್ಯಾ ಅತ್ಯಾಚಾರ, ಹತ್ಯೆ ಪ್ರಕರಣದ ಮರು ತನಿಖೆಗೆ ನಿಯೋಜನೆಗೊಂಡಿರುವ ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿಗೆ ಆಗಮಿಸಿದ್ದು, ಎಸ್ಐಟಿ ಕಚೇರಿಗಾಗಿ ಬೆಳ್ತಂಗಡಿ ಪೊಲೀಸ್ ಠಾಣೆಯ ಸಮೀಪದಲ್ಲಿರುವ ಕಟ್ಟಡದ ಪರಿಶೀಲನೆ ನಡೆಸಿದ್ದಾರೆ.
ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ಕಚೇರಿ ಕಾರ್ಯನಿರ್ವಹಿಸಿದ್ದ ಬೆಳ್ತಂಗಡಿ ಪೊಲೀಸ್ ಠಾಣೆಯ ಪಕ್ಷದಲ್ಲಿರುವ ಕಟ್ಟಡದಲ್ಲಿನ ಸೌಲಭ್ಯಗಳ ಬಗ್ಗೆ ಸೌಜನ್ಯಾ ಪ್ರಕರಣದ ತನಿಖೆಗೆ ನಿಯೋಜಿತ ಎಸ್ಐಟಿಯ ಅಧಿಕಾರಿಗಳಾದ ಐಪಿಎಸ್ ಅಧಿಕಾರಿ ನಿಶಾ ಜೇಮ್ಸ್ ಮತ್ತು ಐಪಿಎಸ್ ಅಧಿಕಾರಿ ಲೋಕೇಶ್ ಜಗಲಾಸರ್ ಗುರುವಾರ ಬೆಳಗ್ಗೆ ಪರಿಶೀಲನೆ ಮಾಡಿರುವುದಾಗಿ ತಿಳಿದು ಬಂದಿದೆ.
ಎಸ್ಐಟಿ ಕಚೇರಿಯ ಕೇಂದ್ರಸ್ಥಾನ ಮಂಗಳೂರಿನಲ್ಲಿ ಇರಲಿದೆಯೇ ಅಥವಾ ಬೆಳ್ತಂಗಡಿಯಲ್ಲಿ ಕಚೇರಿ ಇರಲಿದೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸ್ಥಳೀಯವಾಗಿ ಕಚೇರಿಯಿದ್ದು ಕಾರ್ಯಾಚರಣೆ ನಡೆಸಲು ಅನುಕೂಲವಾಗುವಂತೆ ಬೆಳ್ತಂಗಡಿಯಲ್ಲೂ ಎಸ್ಐಟಿ ಕಚೇರಿ ಇರಲಿದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಇಂದು ಮಂಗಳೂರಿನಲ್ಲಿ ಹಿರಿಯ ಅಧಿಕಾರಿಗಳ ಮಹತ್ವದ ಸಭೆ ನಡೆಯಲಿದ್ದು, ಇದಾದ ಬಳಿಕ ಎಸ್ಐಟಿ ಕಚೇರಿಯ ಬಗ್ಗೆ ಸ್ಪಷ್ಟ ಚಿತ್ರಣ ಲಭಿಸಲಿದೆ.
2012ರ ಅಕ್ಟೋಬರ್ 9ರಂದು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ 17 ವರ್ಷದ ಬಾಲಕಿ ಸೌಜನ್ಯಾಳನ್ನು ಅತ್ಯಾಚಾರಗೈದು ಕೊಲೆಗೈಯಲಾಗಿದೆ. ಈ ಪ್ರಕರಣದ ಕುರಿತು ಹೊಸದಾಗಿ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಸೂಚಿಸಿದೆ. ಎಸ್ಐಟಿ ರಚಿಸಿ, ಮೂರು ತಿಂಗಳೊಳಗೆ ಅನುಸರಣೆ ವರದಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಐಜಿಪಿ ಎನ್. ಶಶಿಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿದೆ.








