ಮಂಗಳೂರು : ಗಿರಿಗಿಟ್ ಸಿನಿಮಾ ಮೂಲಕ ತುಳು ಸಿನಿಮಾರಂಗದಲ್ಲಿ ಸೂಪರ್ ಸಕ್ಸಸ್ ಕಂಡ ನಟ ರೂಪೇಶ್ ಶೆಟ್ಟಿ ಇದೀಗ ‘ಗಮ್ಜಾಲ್’ ಎಂಬ ಹಿಟ್ ಸಿನಿಮಾ ನೀಡಿ ಮತ್ತೊಂದು ಸಕ್ಸಸ್ ತಮ್ಮದಾಗಿಸಿಕೊಂಡಿದ್ದಾರೆ.

ರೂಪೇಶ್ ಶೆಟ್ಟಿ ರಚಿಸಿ ನಟಿಸಿರುವ, ನವೀನ್ ಶೆಟ್ಟಿ ಹಾಗೂ ಸುಮನ್ ಸುವರ್ಣ ನಿರ್ದೇಶನದ ‘ಗಮ್ಜಾಲ್’ ಸಿನಿಮಾ ಬಿಡುಗಡೆಯಾಗಿ ತುಳು ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದೆ. ಚಿತ್ರ ತೆರೆಕಂಡು ದಕ್ಷಿಣ ಕನ್ನಡದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್‍ಗಳಿಕೆಯಲ್ಲೂ ಕೂಡ ಸೌಂಡ್ ಮಾಡುತ್ತಿದೆ.

ಈ ಮೂಲಕ ವರ್ಷದ ಮೊದಲ ಸೂಪರ್ ಹಿಟ್ ಸಿನಿಮಾ ಎಂಬ ಖ್ಯಾತಿಯನ್ನು ‘ಗಮ್ಜಾಲ್’ ಸಿನಿಮಾ ತನ್ನದಾಗಿಸಿಕೊಂಡಿದೆ.‘ಗಮ್ಜಾಲ್’ ಚಿತ್ರಕ್ಕೆ ಸಿಗುತ್ತಿರುವ ಜನರ ಪ್ರೀತಿಯನ್ನು ಕಂಡ ಚಿತ್ರತಂಡ ಬೇರೆ ಕಡೆಗಳಲ್ಲೂ ಸಿನಿಮಾ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿತ್ತು. ಸ್ಯಾಂಡಲ್‍ವುಡ್ ಖ್ಯಾತ ವಿತರಕ ಜಯಣ್ಣ `ಗಮ್ಜಾಲ್’ ಸಿನಿಮಾವನ್ನು ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ವಿತರಣೆ ಮಾಡುತ್ತಿದ್ದಾರೆ.

ಬೆಂಗಳೂರಿನ ಹನ್ನೆರಡು ಸೆಂಟರ್ ಗಳಲ್ಲಿ ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಹಿಂದೆ ರೂಪೇಶ್ ನಿರ್ದೇಶಿಸಿ ನಟಿಸಿದ್ದ ಗಿರಿಗಿಟ್ ಸಿನಿಮಾವನ್ನೂ ಕೂಡ ಜಯಣ್ಣ ಬೆಂಗಳೂರಿನಲ್ಲಿ ವಿತರಣೆ ಮಾಡಿದ್ದರು. ಬೆಂಗಳೂರಿನಲ್ಲಿ ಥಿಯೇಟರ್ ಗಳಿಗೆ ಭೇಟಿ ನೀಡಿದಾಗ ಚಿತ್ರಕ್ಕೆ ಪ್ರೇಕ್ಷಕರು ತೋರಿಸುತ್ತಿರುವ ಪ್ರೀತಿ ಹಾಗೂ ಪ್ರೋತ್ಸಾಹದ ಬಗ್ಗೆ ಮಾತನಾಡಿರುವ ನಟ ರೂಪೇಶ್ ಶೆಟ್ಟಿ ತುಳು ಸಿನಿರಸಿಕರು ಉತ್ತಮ ಸಿನಿಮಾಕ್ಕೆ ಬೆಂಬಲ ನೀಡೇ ನೀಡುತ್ತಾರೆ ಎಂಬ ಭರವಸೆಯಲ್ಲಿ ಸಿನಿಮಾ ರಿಲೀಸ್ ಮಾಡಿದ್ವಿ. ಆ ಭರವಸೆ ನಿಜವಾಗಿದ್ದು ಜನ ಕುಟುಂಬ ಸಮೇತರಾಗಿ ಸಿನಿಮಾ ವೀಕ್ಷಿಸುತ್ತಿದ್ದಾರೆ. ಇದರಿಂದ ಬೇರೆ ಸಿನಿಮಾ ಬಿಡುಗಡೆಗೂ ಧೈರ್ಯ ಸಿಕ್ಕಂತಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.











