ಮುಂಬೈ: ಮಹಿಳಾ ದಿನಾಚರಣೆ ಹಿನ್ನೆಲೆ ಉದ್ಯಮಿ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಮಹಿಳೆಯರಿಗಾಗಿಯೇ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಒಂದನ್ನ ಲಾಂಚ್ ಮಾಡಿದ್ದಾರೆ. ಈ ಪ್ಲಾಟ್ಫಾರ್ಮ್ಗೆ ಹರ್ ಸರ್ಕಲ್ ಎಂದು ಹೆಸರಿಡಲಾಗಿದೆ.
ಈ ಸೋಷಿಯಲ್ ಮೀಡಿಯಾ ವೇದಿಕೆಯನ್ನು ಸದ್ಯ ಭಾರತೀಯ ಮಹಿಳೆಯರನ್ನೇ ಗಮನದಲ್ಲಿಟ್ಟುಕೊಂಡು ರಚಿಸಲಾಗಿದ್ದರೂ ವಿಶ್ವದಾದ್ಯಂತ ಮಹಿಳೆಯರು ಈ ಪ್ಲಾಟ್ಫಾರ್ಮ್ಗೆ ಸೇರಬಹುದಾಗಿದೆ.
ಮಹಿಳೆಯರಿಗೆ ಸಹಾಯವಾಗುವಂಥ ವಿಡಿಯೋ, ಆರ್ಟಿಕಲ್ಗಳು, ಸಮಸ್ಯೆಗಳನ್ನ ಬಗೆಹರಿಸುವಂಥ ತಂತ್ರಗಳು, ಆರೋಗ್ಯ, ಹಣಕಾಸು, ಬ್ಯೂಟಿ, ಫ್ಯಾಷನ್, ಪರ್ಸನಾಲಿಟಿ ಡೆವಲೆಪ್ಮೆಂಟ್ನಂಥ ವಿಚಾರಗಳನ್ನು ಹಂಚಿಕೊಳ್ಳಲು ಅಥವಾ ತಿಳಿದುಕೊಳ್ಳುವ ಒಟ್ಟು ವೇದಿಕೆಯಾಗಿದೆ ಎಂದು ಪ್ಲಾಟ್ ಫಾರ್ಮ್ ತನ್ನ ಪ್ರಕಟಣೆಯಲ್ಲಿ ಹೇಳಿಕೊಂಡಿದೆ.
ಈ ವೆಬ್ಸೈಟ್ ಡೆಸ್ಕ್ಟಾಪ್ ಮತ್ತು ಮೊಬೈಲ್ ವರ್ಷನ್ನಲ್ಲಿ ಲಭ್ಯವಿದ್ದು ಆ್ಯಪ್ ರೂಪದಲ್ಲಿ ಉಚಿತವಾಗಿ ಗೂಗಲ್ ಪ್ಲೇ ಮತ್ತು ಮೈ ಜಿಯೋ ಆ್ಯಪ್ ಸ್ಟೋರ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಪ್ರಾರಂಭಿಕವಾಗಿ ಇಂಗ್ಲೀಷ್ ಭಾಷೆಯಲ್ಲಿ ಈ ವೆಬ್ಸೈಟ್ ಲಭ್ಯವಿದ್ದು ಮುಂದಿನ ದಿನಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲೂ ಲಭ್ಯವಾಗಲಿದೆಯೆಂದು ತಿಳಿಸಿದ್ದಾರೆ.