ಉಡುಪಿ: ಕರಾವಳಿ ಬೈಪಾಸ್ ಬಳಿ ವಾಹನ ತಪಾಸಣೆ ವೇಳೆ ಕರ್ತವ್ಯ ನಿರತ ಸಂಚಾರ ಪೊಲೀಸ್ ಠಾಣೆಯ ಎಎಸ್‌ಐ ಚಂದ್ರಶೇಖರ ಅವರಿಗೆ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಚಂದ್ರಶೇಖರ್ ರವರು ಸಿಬಂದಿಯವರ ಜತೆಯಲ್ಲಿ ಕರಾವಳಿ ಬೈಪಾಸ್ ಬಳಿ ವಾಹನ ತಪಾಸಣೆಯ ಕರ್ತವ್ಯದಲ್ಲಿ ನಿರತರಾಗಿದ್ದರು. ಈ ಸಂದರ್ಭದಲ್ಲಿ ಒರ್ವ ವ್ಯಕ್ತಿ ಓಡಿ ಬಂದು ‘ಏ ಪೊಲೀಸರೇ ನಿಮಗೆ ವಾಹನ ಚೆಕ್ ಮಾಡಲು ಏನು ಅಧಿಕಾರ ಇದೆ?’ ಎಂದು ಹೇಳಿ, ಏಕಾಏಕಿ ಚಂದ್ರಶೇಖರ್ ರವರ ಎಡ ಕೆನ್ನೆಗೆ ಬಲವಾಗಿ ಹೊಡೆದಿದ್ದಾನೆ.

ಪರಿಣಾಮ ಅವರ ಕನ್ನಡಕ ಒಡೆದುಹೋಗಿದೆ. ಇಷ್ಟಕ್ಕೆ ಬಿಡದ ಆರೋಪಿಯು ಅವರ ಶರ್ಟಿನ ಕಾಲರ್ ಪಟ್ಟಿಯನ್ನು ಹಿಡಿದೆಳೆದಿದ್ದಾನೆ ಬಿಡಿಸಲು ಬಂದ ಸಾರ್ವಜನಿಕರಿಗೂ ಕೈಯಿಂದ ಹೊಡೆದು, ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದಾನೆ.

ಆರೋಪಿಯನ್ನು ಬಾಗಲಕೋಟೆಯ ಶಿವಕುಮಾರ್ ಆಸಂಗಿ(21) ಎಂದು ಗುರುತಿಸಲಾಗಿದೆ. ಈತನಲ್ಲಿ ಯಾವುದೇ ವಾಹನ ಇಲ್ಲದಿದ್ದರೂ ಏಕಾಏಕಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಘಟನೆ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










