
ಪ್ರಧಾನಮಂತ್ರಿ ನರೇಂದ್ರ ಮೋದಿ ಹೈದರಾಬಾದ್ನ ಪತಂಚೆರುವಿನಲ್ಲಿ ಅರೆ-ಶುಷ್ಕ ಉಷ್ಣವಲಯದ ಅಂತಾರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆಯ ಸುವರ್ಣಮಹೋತ್ಸವ ಕಾರ್ಯಕ್ರಮಕ್ಕೆ ನಿನ್ನೆ ಚಾಲನೆ ನೀಡಿದರು. ಇದೇ ವೇಳೆ ಪ್ರಧಾನಿ ಮೋದಿ, ಬೆಳೆಗಳ ಸಂಶೋಧನಾ ಸಂಸ್ಥೆಯ ಹೊಸ ಹವಾಮಾನ ಬದಲಾವಣೆ ಸೌಲಭ್ಯವನ್ನು ಅನಾವರಣಗೊಳಿಸಿದರು. ಅಷ್ಟೇ ಅಲ್ಲ, ಸುವರ್ಣ ಮಹೋತ್ಸವ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹವಾಮಾನ ಬದಲಾವಣೆಯೆಂಬುದು ನಮ್ಮ ರೈತರಿಗೆ ಅತ್ಯಂತ ದೊಡ್ಡ ಸವಾಲಾಗಿದೆ. ಕೃಷಿಯಲ್ಲಿ ಮೂಲಭೂತ ವಿಷಯಗಳಿಗೆ ಉತ್ತೇಜನ ನೀಡುವ ಜತೆ, ಭವಿಷ್ಯದೆಡೆಗೆ ಧಾವಿಸುವುದರತ್ತ ನಾವು ಗಮನ ನೆಟ್ಟಿದ್ದೇವೆ. ನಮ್ಮ ಅಗತ್ಯವನ್ನು ದೊಡ್ಡ ಮಟ್ಟದಲ್ಲಿ ಪೂರೈಸುವ ಈ ದೇಶದ ಶೇ.80ರಷ್ಟು ಸಣ್ಣ ರೈತರತ್ತ ನಾವು ಗಮನ ಕೇಂದ್ರೀಕರಿಸಿದ್ದೇವೆ. ಅದರ ಭಾಗವಾಗಿಯೇ ನಮ್ಮ ಕೇಂದ್ರ ಸರ್ಕಾರದ 2022-23ರ ಬಜೆಟ್ನಲ್ಲಿ ನೈಸರ್ಗಿಕ ಬೇಸಾಯ ಮತ್ತು ಡಿಜಿಟಲ್ ಕೃಷಿಗೆ ಒತ್ತು ನೀಡಲಾಗಿದೆ ಎಂದು ಹೇಳಿದರು. ಐಸಿಆರ್ಐಎಸ್ಎಟಿ ಸಂಸ್ಥೆಯು ಕಳೆದ 5 ದಶಕಗಳಿಂದಲೂ ಕೂಡ ಕೃಷಿಯನ್ನು ಸುಲಭ ಮತ್ತು ಸುಸ್ಥಿರಗೊಳಿಸಲು ಇತರ ದೇಶಗಳಿಗೆ ಸಹಾಯ ಮಾಡುತ್ತಿದೆ. ಹಾಗೇ, ಈ ಸಂಸ್ಥೆ ಭಾರತದ ಕೃಷಿ ವಲಯ ಬಲಪಡಿಸುವ ನಿಟ್ಟಿನಲ್ಲಿ ತಮ್ಮ ಸೇವೆಯನ್ನು ಮುಂದುವರಿಸುತ್ತದೆ ಎಂಬ ಭರವಸೆ ನನಗೆ ಇದೆ ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ.










